ಕೇಳುವುದು ಕಾಣದಿದೆ
ಕಾಣುವುದು ಕೇಳದಿದೆ
ಕಂಡರೇನುಂಡರೇನ್ ?
ಹಿಡಿಯಲಾಗದಿದೆ !
ಕಂಡುರೂ ಕೇಳ್ದರೂ
ಗಮಿಸಲಾರದ ಸತ್ಯ !
ಬೊಮ್ಮಾಭಿವ್ಯಕ್ತಿ ಜಗ !
ಜಾಣಮೂರ್ಖ //
ಇಲ್ಲಿ ಕೇಳುವುವು ಕಾಣವು ! ಕಾಣುವುವು ಕೇಳವು ! ಕಂಡು ಕೇಳಿ ನಮ್ಮನುಭವಕ್ಕೆ ಬಂದರೂನೂ ಗಮಿಸಲಸಾಧ್ಯವು ! ಇದೇನಿದು ಹೀಗೆ ಎಂದುಕೊಳ್ಳುತ್ತಿರುವಿರಾ ಗೆಳೆಯರೇ ? ಈಗ ನೀವೇ ನೋಡಿ ಕೋಗಿಲೆಯ ಮಧುರವಾದ ಕೂಗಿನಿಂದ ಹಿಡಿದು ಎಲ್ಲಾ ಹಕ್ಕಿಗಳ ಇಂಚರವೂ ಕೇಳುತ್ತದೆ ಆದರೆ ನೋಡೋಕಾಗಲ್ಲ ! ಅಲ್ಲವೇ ? ಹಾಗೆಯೇ ಸಕಲ ಜೀವರಾಶಿಗಳಲ್ಲಿ ಅಡಗಿರುವ ಪ್ರಾಣಶಕ್ತಿಯ ಅಸ್ತಿತ್ವವು ಗೋಚರಿಸುತ್ತದೆ. ಎಷ್ಟು ನಿಶ್ಶಬ್ಧವಾಗಿ ಗಿಡ ಚಿಗುರುತ್ತೆ ! ಹೂ ಕಾಯಿ ಹಣ್ಣು ಬಿಡುತ್ತೆ ಅಲ್ಲವೇ ? ಅಂಬೆಗಾಲಿಕ್ಕಿ ತಂದೆ ತಾಯ್ಗಳಿಗೆ ಅಜ್ಜ ಅಜ್ಜಿಯರಿಗೆ ಬಾಲಲೀಲೆಗಳನ್ನು ತೋರಿದ ನಾವೆಲ್ಲಾ ಕ್ರಮೇಣ ಬೆಳೆದು ದೊಡ್ಡವರಾಗಿ ಮುದುಕರಾಗಿ ನಂತರದ ಪೀಳಿಗೆಗೆ ಜಾಗ ಬಿಟ್ಟು ಮೌನವಾಗಿ ಸಾಗಿಬಿಡುತ್ತಿದ್ದೇವೆ !?
ಮೌನವಾಗಿ ಚಿಗುರು ಹಣ್ಣೆಲೆಯಾಗಿ ಹೊಸ ಚಿಗುರಿಗೆ ದಾರಿಬಿಟ್ಟು ಸಾಗುತ್ತಿದೆ ಅಲ್ಲವೇ !?
ಇವೆಲ್ಲಾ ಕಂಡರೂ ಕೇಳ್ದರೂ ಗಮಿಸಲಾರದ ಸತ್ಯಗಳು. ಅಂತಹಾ ಭಗವಂತನ ಬ್ರಹ್ಮಾಭಿವ್ಯಕ್ತಿಯೇ ಈ ಜಗತ್ತು ! ಇದನ್ನು ಮನದುಂಬಿ ಅನುಭವಿಸಿ ಮೌನವಾಗಿ ಸಾಗುತ್ತಿರಬೇಕಷ್ಟೆ. ಇದರ ಮುಂದೆ ನಮ್ಮ ಬೇರೆ ರೀತಿ ನೀತಿಗಳೆಲ್ಲಾ ಏನು ? ಏನಾಗುತ್ತದೆ ಎಂದು ನೀವೇ ಹೇಳಬೇಕು. ಕಾಣ್ವಂಗೆ ಕಡಲು ಕಾಣದವಗೆ ಬರೀ ನೀರು ಮಳಲು ಅಷ್ಟೆ !
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021