ಒಂದು ನಾಲ್ಕು ಗಳಿಗೆ ಕ್ಯಾಮೆರಾ ಹಿಡಿದು ಹೊರ ಹೋದರೂ ವಾಪಸು ಬರುವುದು ಕನಿಷ್ಠ ಹತ್ತು ಫೋಟೋಗಳೊಂದಿಗೇ. ಇಂಥದ್ದರಲ್ಲಿ ೧೨ ವರ್ಷಗಳಿಂದ ತೆಗೆದಿರುವ ಫೋಟೋಗಳು ಎಷ್ಟಿರಬಹುದು? ಅಲ್ಲಿಲ್ಲಿ ಶೇರ್ ಮಾಡುವುದು ಯಾವುದೋ ನಾಲ್ಕಾರು. ಉಳಿದದ್ದೆಲ್ಲಾ ಕಂಪ್ಯೂಟರಿನಲ್ಲಿ. ಬೇರೆಯವರು ಫ್ರೇಮ್ ಹಾಕಿಸಿದ ಫೋಟೋಗಳನ್ನು ನೋಡಿದಾಗ ಆಸೆಯಾಗುವುದಿದೆ, ನಾನು ತೆಗೆದ ಫೋಟೋಗಳನ್ನೂ ಕಟ್ಟು ಹಾಕಿಸಿ ಗೋಡೆ ಮೇಲೆ ನೇತುಹಾಕಬೇಕೆಂದು. ಆಸೆ ಪಟ್ಟದ್ದೆಷ್ಟುಸಾರಿಯೋ. ಆದರೆ ಪ್ರತೀ ಸಾರಿ ಸೋತು ನಿಲ್ಲುತ್ತೇನೆ. ಅತೀ ಇಷ್ಟವಾಗುವ ಒಂದು ಫೋಟೋ ಹುಡುಕಲು.
ಏನಾದರೂ ಮಾಡಿ ಇಂದು ಹುಡುಕಿಯೇ ಬಿಡುವೆ. ಇರುವ ಎಂಬತ್ತೊಂಬತ್ತು ಸಾವಿರಕ್ಕೂ ಹೆಚ್ಚು ಫೋಟೋಗಳ ಆರ್ಕೈವ್ ನಿಂದ ಐದು ಚಿತ್ರಗಳನ್ನು ಆರಿಸಿ ಉಳಿದವರ ಸಲಹೆ ತೆಗೆದುಕೊಂಡು ಆ ಐದು ಚಿತ್ರಗಳಲ್ಲಿ ಒಂದನ್ನು ಆರಿಸಿ ಹಾಲಿನ ಗೋಡೆಯನ್ನು ಅಲಂಕರಿಸುವೆ ಎಂದು ಬೆಳಿಗ್ಗೆ ಎದ್ದ ಕೂಡಲೇ ನಿರ್ಧರಿಸಿದೆ. ಬೇಗ ಬೇಗ ಕೆಲಸ ಮುಗಿಸಿ ಕಂಪ್ಯೂಟರ್ ಎದುರಿಗೆ ಕುಳಿತರೆ ಆರಿಸುವುದೇನನ್ನು? ಹೂವನ್ನೇ ?ಬೆಟ್ಟವನ್ನೇ ? ಸಮುದ್ರವನ್ನೇ? ವಿಸ್ತಾರವಾದ ಹಸಿರು ಬಯಲುಗಳನ್ನೇ? ಮಕ್ಕಳ ಚಿತ್ರಗಳನ್ನೇ? ಇಲ್ಲಾ, ಮನುಷ್ಯರ ಚಿತ್ರಗಳು ಬೇಡ. ಪ್ರತಿದಿನ ಒಂದಾ ದೇವರ ಫೋಟೋ ನೋಡಬೇಕು ಅಥವಾ ಪ್ರಕೃತಿ ಕಣ್ಣಿಗೆ ಬೀಳುವಂತಿರಬೇಕು. ಪ್ರಕೃತಿಯ ಎಲ್ಲಾ ಆಯಾಮಗಳಿಂದ ಒಂದೊಂದು ಫೋಟೋ ಹುಡುಕುವೆ. ಆಮೇಲೆ ಎಲ್ಲರೂ ಸೇರಿ ಒಂದನ್ನು ಆರಿಸಿದರಾಯಿತು. ನಿರ್ಧರಿಸಿದ್ದೆ.
ದಿನವಿಡೀ ಹುಡುಕಿ ತೆಗೆದಿದ್ದು ಯೋಚಿಸಿದಂತೆ ಐದು ಚಿತ್ರಗಳು. ಮನೆಯವರೂ ಬಂದು ಆರಿಸಿದ್ದಾಯ್ತು. ನಮ್ಮ ಸೋಫಾ ಡಾರ್ಕ್ ಪಿಂಕ್ ಬಣ್ಣದ್ದು. ಅದಕ್ಕೆ ಹೊಂದುವಂತೆ ಒಂದು ಟ್ಯೂಲಿಪ್ ಹೂವಿನ ಚಿತ್ರ ಇಬ್ಬರಿಗೂ ಮೆಚ್ಚಿಗೆಯಾಯಿತು.
ಇನ್ನೇನು ಪ್ರಿಂಟ್ ಮಾಡಲು ಆರ್ಡರ್ ಮಾಡಬೇಕು, ಕೊನೆಯದಾಗಿ ಮಗಳನ್ನು ಕೇಳೋಣ ಎಂದುಕೊಂಡು ಕರೆದರೆ,
“ಅಮ್ಮಾ, ಫೋಟೋ ಯಾತಕ್ಕೆ?”
“ನಮ್ಮ ಹಾಲಿನಲ್ಲಿ ಗೋಡೆಗೆ”
“ದುಡ್ಡೆಷ್ಟು?”
” xyz ಯೂರೋ ”
“ಅಷ್ಟಾ? ಗೋಡೆಯ ಮೇಲೆ ಈಗ ಇರುವ ಫೋಟೋಗೆ ಏನಾಗಿದೆ?”
” ಅದು ನಾನು ತೆಗೆದ ಫೋಟೋ ಅಲ್ಲ”
“ನೀನೇನು ಮನೆಗೆ ಬಂದವರಿಗೆ ಹೇಳಬೇಕೇ? ಇದು ನಾನು ತೆಗೆದ ಫೋಟೋ, ಇದು ನಾನು ತೆಗೆದ ಫೋಟೋ ಎಂದು?”
“ಇಲ್ಲ, ಈಗಿರುವ ಫೋಟೋ ಅಷ್ಟು ಚೆನ್ನಾಗಿಲ್ಲ”
“ಚೆನ್ನಾಗಿಲ್ಲದಿದ್ದರೆ ಏಕೆ ಕೊಂಡುಕೊಂಡಿರಿ ?”
“ಕೊಂಡುಕೊಳ್ಳುವಾಗ ಚೆನ್ನಾಗಿದೆ ಎನ್ನಿಸಿತ್ತು. ಆದರೆ ಈಗ ನನ್ನ ಬಳಿ ಇನ್ನೂ ಚೆಂದದ ಫೋಟೋಗಳಿವೆ”
“ಇವತ್ತು ಚೆಂದ ಕಾಣುವ ಫೋಟೋ, ಆ ಗೋಡೆಯ ಮೇಲಿರುವ ಫೊಟೋದಂತೆಯೇ ನಾಳೆ ಚೆನ್ನಾಗಿಲ್ಲ ಎನ್ನಿಸಬಹುದು.”
“ಏನೋ, ಆಸೆಯಾಗುತ್ತಿದೆ. ಬೇಕು ಎನ್ನಿಸುತ್ತಿದೆ”
“ಬೇಕು ಎನ್ನಿಸುತ್ತಿದೆ ಎಂದು ದುಡ್ಡು ಹಾಳು ಮಾಡುವುದೇ?”
ಉತ್ತರ ಇರಲಿಲ್ಲ. ನನ್ನ ಬಾಯಲ್ಲಿ ಬರಬೇಕಾದ ಮಾತುಗಳು ೧೩ ವರ್ಷದ ಅವಳ ಬಾಯಿಂದ ಬರುತ್ತಿದ್ದವು.
ಸೋಲಲು ನಾನು ತಯಾರಿರಲಿಲ್ಲ. ಬೆಳಿಗ್ಗೆ ಮಾಡಿದ್ದ ನಿರ್ಧಾರ, ಫೋಟೋ ಹುಡುಕಲು ಕಳೆದ ೫-೬ ಗಂಟೆಗಳ ಸಮಯ ಸೋಲಬೇಡ ಎಂದು ಎಚ್ಚರಿಸುತ್ತಿದ್ದವು.
ಕೊನೆಯ ಅಸ್ತ್ರವೆಂಬಂತೆ, “ದುಡಿಯುತ್ತಿದ್ದೇನೆ. ಮನಸ್ಸಿಗೆ ಇಷ್ಟವಾಗುವ ಏನನ್ನೂ ಮಾಡದಿದ್ದರೆ ದುಡಿಯುವುದೂ ನಿರರ್ಥಕ ಎನ್ನಿಸುತ್ತದೆ. ಕೂಡಿಟ್ಟು ಏನು ಮಾಡಬೇಕು?”
“ಬೇಡದ್ದಕ್ಕೆ ಖರ್ಚು ಮಾಡದೆ ಕೂಡಿಟ್ಟರೆ ಮುಂದಿನ ಜನಾಂಗ ಕೃತಜ್ಞತಾ ಭಾವನೆ ತೋರುತ್ತದೆ” ( ಆಕೆ ಆಡಿದ ಜರ್ಮನ್ ವಾಖ್ಯ ಇನ್ನೂ ಸ್ಟ್ರಾಂಗ್ ಆಗಿ ಇತ್ತು)
ಪ್ರಕೃತಿಯ ವಿಷಯದಲ್ಲಿ ಮುಂದಿನ ಜನಾಂಗದ ಬಗ್ಗೆ ಪ್ರತಿ ಕ್ಷಣದಲ್ಲೂ ಯೋಚಿಸುವ ನಾನು ದುಡ್ಡಿನ ವಿಷಯದಲ್ಲಿ ಮುಂದಿನವರಿಗೆ ಎಂದು ಕೂಡಿಡುವ ವಿಷಯದಲ್ಲಿ ವಿರೋಧ ಹೊಂದಿದ್ದೆ. ಆದರೂ ಆಕೆಯ ಮಾತಿನಲ್ಲಿ ಸತ್ಯವಿತ್ತು. ಇದೆ ಎಂದು ಅಗತ್ಯಕ್ಕಿಂತ ಹೆಚ್ಚು ಏನನ್ನೂ ಉಪಯೋಗಿಸಬಾರದು. ಇಂದು ಗೋಡೆಯ ಮೇಲಿರುವ ಚಿತ್ರ ಕಸವಾದರೆ ನಾಳೆ ಈ ಹೊಸ ಚಿತ್ರವೂ ಕಸವಾಗಬಹುದು. ಪ್ರಕೃತಿಯ ವಿನಾಶಕ್ಕೆ ಇದೂ ಕಾರಣವೇ.
ಆಕೆ ಹೇಳುವ ಪ್ರತೀ ಮಾತೂ ಸರಿಯಾಗಿತ್ತು. ಬಟ್ಟೆ ಕೊಡಿಸಲು ಅಂಗಡಿಗೆ ಕರೆದುಕೊಂಡು ಹೋದರೆ, ನಾನು ಎರಡು ಕೊಡಿಸುವೆ ಎಂದರೂ, ಬೇಡ, ಒಂದು ಸಾಕು ಎಂದು ಇಡೀ ವಾರಕ್ಕೆ ೨ ಜೀನ್ಸ್ ೪-೫ ಟಾಪ್ಸ್ ನಲ್ಲಿ ದಿನ ತಳ್ಳುವ, ಹಾಕಿದ್ದೇ ಹಾಕುವೆ, ಚಳಿಗಾಲದಲ್ಲಿ ಒಣಗುವುದೂ ಇಲ್ಲ ಎಂದರೂ, ಹೆಚ್ಚು ಇದ್ದರೆ ಮಡಿಸಿ, ಜೋಡಿಸಿ ಇಡುವ ಕೆಲಸ ಹೆಚ್ಚು, ಬೀರು ನೀಟ್ ಆಗಿ ಉಳಿಯುವುದಿಲ್ಲ ಎಂದು ರಗಳೆ ಮಾಡುವ ಅವಳು ಉಳಿತಾಯದ ಪಾಠ ಹೇಳಲು ಖಂಡಿತ ಅರ್ಹಳಾಗಿದ್ದಳು. ನಾನು ಪುನಃ ಸೋತಿದ್ದೆ. ಆಕೆ ಗೆದಿದ್ದಳು.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020