ಕೈಲಿಹುದು ಗಡಿಯಾರ
ಕಾಲ ಕೈಯೊಳಗಿಹುದೆ ?
ಕಾಯಮಿರ್ದೊಡೆಯಾಯ್ತೆ
ಬಂಧಿಯೇನಾತ್ಮ ?
ಬಂಧಿಯೇಂ ಭಗವಂತ?
ಬಯಲಾದವಗೆ ಗುಡಿಯೆ ?
ಬೆಮೆಯ ಬಿಟ್ಟೇಳು ಬಾ
ಜಾಣಮೂರ್ಖ //
ಈ ಜಗತ್ತಿನಲ್ಲಿ ಸ್ಥೂಲ ಸೂಕ್ಷ್ಮಗಳ ಅರಿವು ಸ್ಥಾಯಿಯಾದರೆ ಜನ್ಮ ಸಾರ್ಥಕವಾದಂತೆ. ಈಗ ನೀವೇ ನೋಡಿ, ಗಡಿಯಾರ ನಮ್ಮ ಕೈಲಿರುತ್ತದೆ ಆದರೆ ಕಾಲವು ನಮ್ಮ ಕೈಯ್ಯಲ್ಲಿಲ್ಲ ! ಅದು ಯಾರಿಗಾಗೂ ಕಾಯುವುದೂ ಇಲ್ಲ. ಗಡಿಯಾರವನ್ನು ಕಟ್ಟಿಹಾಕಬಹುದು ಆದರೆ ಕಾಲವನ್ನು ಕಟ್ಟಿಹಾಕಲು ಸಾಧ್ಯವೇ ? ಬಹು ಸುಂದರವಿರುತ್ತದೆ ದೇಹ. ಆದರೆ ಆತ್ಮ ! ಅದೇನು ಬಂಧಿಯೇನು ? ಕಾಲವು ಹೇಗೆ ನಿಲ್ಲುವುದಿಲ್ಲವೋ ಕಾಲನ ಕರೆ ಬಂದಾಗ ಆತ್ಮವೂ ಅಷ್ಟೆ. ಕ್ಷಣಮಾತ್ರವೂ ನಿಲ್ಲದು ! ಅಂತೆಯೇ ಗುಡಿಯಲ್ಲಿ ದೇವನನ್ನಿಟ್ಟು ಪೂಜಿಸಿ ಅವನನ್ನು ಕೂಡಿ ಭದ್ರವಾದ ಬೀಗ ಹಾಕುತ್ತೇವೆ. ಬಯಲಾದವನಿಗೆ ಬಂಧನವೇ ? ಸೃಷ್ಟಿಕರ್ತನೇ ತಾನಾಗಿ ! ಅಖಂಡ ಸೃಷ್ಟಿಯೇ ತಾನಾಗಿರುವವನನ್ನು ಬಂಧಿಸುವುದು ಭ್ರಮೆಯಲ್ಲವೇ ? ಆದರೆ ಯದ್ಭಾವಂ ತದ್ಭವತಿ ಭಾವಿಸಿದಂತೆಲ್ಲಾ ಅವನು ತೋರುತ್ತಾನಾದ್ದರಿಂದ ಅದನ್ನು ತಪ್ಪೆಂದು ಹೇಳಲಾಗದು. ಆದರೆ ಭ್ರಮೆಯನ್ನು ಬಿಟ್ಟು ಸ್ಥೂಲ ಸೂಕ್ಷ್ಮಗಳ ಅರ್ಥಪೂರ್ಣ ಅರಿವನ್ನು ಪಡೆದು ಬದುಕ ಕಳೆವುದು ನಿಜವಾದ ಸಾರ್ಥಕ ಬದುಕಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021