ಹರಿಕಥೆಯ ಕೇಳಿ ಬಲು
ತೀರ್ಥಯಾತ್ರೆಯ ಮಾಡಿ
ಸತ್ಸಂಗದೊಳ್ಮಿಂದು
ಜಾರುವುದು ತರವೆ ?
ಅರಿತು ತಾನಳಿಯದಿರೆ
ನನ್ನೊಳಗಿನಾ ನಾನು
ನಿನ್ನ ನೀನೆಂತರಿವೆ
ಜಾಣಮೂರ್ಖ //
ಹರಿಕಥೆಯನ್ನು ಕೇಳಬಹುದು , ತೀರ್ಥಯಾತ್ರೆ ಮಾಡಬಹುದು , ಸತ್ಸಂಗದಲ್ಲಿ ಮಿಂದು ಜನ್ಮ ಪಾವನಗೊಂಡಿತು ಎಂದು ನಮಗೆ ನಾವೇ ಹೇಳಿಕೊಳ್ಳಬಹುದು. ಆ ಕ್ಷಣಕ್ಕೆ ಹಾಗನ್ನಿಸುತ್ತದೆ. ಆದರೆ ಸತ್ಯವೇ ಬೇರೆ. ಇವೆಲ್ಲವನ್ನೂ ಮಾಡಿ ನನ್ನೊಳಗಿರುವ ನಾನು ಎಂಬ ಅಹಂಕಾರ ಅಳಿಯದಿದ್ದರೆ ! ನಿಜವಾಗಿ ನಾನು ಯಾರೆಂಬ ಸತ್ಯ ತಿಳಿಯುವುದಾದರೂ ಹೇಗೆ ? ಅರಿವಿನ ಮೇಲ್ಪದರಿಗೇ ಆತುರಪಟ್ಟು ಅಹಂಕಾರ ಪೂರಿತನಾದರೆ ಹೇಗೆ ? ಅದರ ಒಳಗಿನ ಸತ್ವ ಕೈಗೆಟುಕುವವರೆಗೂ ತಾಳ್ಮೆಯಿಂದ ಕಾಯಬೇಕು. ಆ ಸತ್ವ ಕೈಗೆಟುಕಿದರಾಯ್ತು ! ಅದೇ ಆತ್ಮಾನಂದವಯ್ಯ ಗೆಳೆಯ. ಮತ್ತೆಲ್ಲವೂ ಶೂನ್ಯ.ಆದರೆ ನನ್ನ ಅಂತರಂಗಕ್ಕೆ ‘ನಾನು’ ಎಂಬ ಅಂಧಕಾರ ಕವಿದಿರಲು ನಾನು ಯಾರು ಎಂಬ ಸತ್ಯ ಕಾಣುವುದಾದರೂ ಹೇಗೆ ? ಅಲ್ಲವೇ. ಅಂತಹಾ ಅಂತರಂಗವನ್ನು ಶುದ್ಧಿಗೊಳಿಸಿ ಆತ್ಮಸತ್ಯದ ಮಾರ್ಗವನ್ನು ತೋರಿಸುವವನು ಗುರು. ಅಂತಹಾ ಶಿಕ್ಷಕರ ದಿನಾಚರಣೆ ಇಂದು. ಎಲ್ಲ ಉಪಾಧ್ಯಾಯರುಗಳಿಗೂ ಭಕ್ತಿಪೂರ್ವಕ ಪ್ರಣಾಮಗಳು.🙏
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021