ವಿಶ್ವಸಿರಿಯೆದುರೆಂತ
ನಶ್ವರದ ಸಿರಿ ತೂರು
ವಿಶ್ವೇಶ ಬೀಗಿದನೆ
ಈಶ ತಾನೆಂದು ?
ಸುತ್ತಲಿರೆ ಜೀವಸಿರಿ
ಸತ್ತಸಿರಿಗೆಳೆಸುವೇ
ಕೆದ್ದು ಬಾ ಕತ್ತಲಿಂ
ಜಾಣಮೂರ್ಖ //
ವಿಶ್ವಸಿರಿಯ ಬಗ್ಗೆ ನಾವಾರೂ ಚಿಂತಿಸುವುದೇ ಇಲ್ಲ . ಇದು ಅನಂತವಾದ ಜೀವಸಿರಿ. ಅನಂತ ಜೀವರಾಶಿಗಳಿಗೆ ಜೀವನಾಧಾರವಾಗಿರುವ ಸಿರಿ. ಈ ಸಿರಿಯ ಮುಂದೆ ಚಿನ್ನ , ಬೆಳ್ಳಿ ಮುತ್ತು ರತ್ನಗಳೆಲ್ಲ ಸತ್ತಸಿರಿಯೇ ಸರಿ. ನಾವು ಇದನ್ನೇ ಸಿರಿಯೆಂದು ಭಾವಿಸುತ್ತೇವಷ್ಟೆ. ಇಂತಹಾ ಜೀವಸಿರಿಯನ್ನು ನಿರ್ವಹಿಸುತ್ತಿರುವ ಅಗೋಚರ ಶಕ್ತಿಯಾದ ದೇವನು ತಾನೆಂದೂ ಅಹಂಕಾರದಿಂದ ಬೀಗನು. ಸೂರ್ಯನಂತಹ , ಚಂದ್ರನಂತಹಾ, ನದಿ ಸಾಗರಗಳಂತಹಾ ಸಿರಿ ಎಲ್ಲಾದರೂ ಉಂಟೆ !? ಜೀವನಾಧಾರವಾದ ಗಾಳಿ , ನೀರಿನಂತಹಾ ಸಿರಿಯುಂಟೆ ? ಇಂತಹಾ ಅನಂತ ಸೂರ್ಯ, ಚಂದ್ರ , ಗ್ರಹತಾರೆಗಳು ಈ ಸೃಷ್ಟಿಯಲ್ಲಿ ಅದೆಷ್ಟು ಜೀವರಾಶಿಗಳಿಗೆ ಆಶ್ರಯವಿತ್ತಿವೆಯೋ ಅರಿತವರು ಯಾರು ? ಈ ಎತ್ತರದಲ್ಲಿ ಚಿಂತಿಸಿದಾಗ ನಶ್ವರದ ಸಿರಿಗೆಳೆಸಿ, ಹೋರಾಟದ ಬದುಕು ಸಾಗಿಸುತ್ತಿರುವ ನಾವೆಷ್ಟು ಕತ್ತಲಲ್ಲಿದ್ದೇವೆಂದು ತಿಳಿಯುತ್ತದೆ. ಆ ಕತ್ತಲಿಂದೆದ್ದು ಬೆಳಕಿನೆಡೆಗೆ ಸಾಗಬೇಕಾಗಿದೆ. ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021