ಮರೆವೆವೆಲ್ಲವ ಮಲಗಿ
ಗಾಢ ನಿದಿರೆಯೊಳಿಳಿದು
ನಾನತ್ತ್ವವಳಿದು ಸುಖ
ಸೂರೆಗೊಂಡಂತೆ !
ಅಂಟಿಯೂ ಅಂಟದಂ
ತಾತ್ಮಸುಖಿ ಸುಖಿಪನೈ
ನಿದಿರೆ ಮದಿರೆಗಳೇಕೊ
ಜಾಣಮೂರ್ಖ//
ಮಲಗಿ ನಿದ್ರಿಸುವಾಗ ನಮಗೇನೂ ಗೊತ್ತಾಗುವುದಿಲ್ಲ. ಅದೊಂದು ನಿರಾತಂಕದ ಸ್ಥಿತಿ. ಜಾತಿ , ಮತ , ಧರ್ಮ, ಒಳಿತು , ಕೆಡುಕು ಎಲ್ಲವನ್ನೂ ಮರೆತು ಸುಖಿಸುತ್ತೇವೆ. ನಾನತ್ವವು ಅಳಿದು ಅತಿಸುಖಿಗಳಾಗಿರುತ್ತೇವೆ. ಆದರೆ ನಿದ್ರೆ ಮುಗಿಯುವುದೇ ತಡ ಮತ್ತೆ ಚಿಂತೆಗಳ ದಂಡು ! ಆದರೆ ಕೆಲವರು ನಿದಿರೆಯಷ್ಟೇ ಏಕೆ ಎಚ್ಚರದ ಬದುಕಿನಲ್ಲೂ ಸಂತೃಪ್ತರು. ಎಲ್ಲಕ್ಕೂ ಅಂಟಿಯೂ ಅಂಟದಂತಿರುತ್ತಾರೆ. ಬದುಕಿನ ಏರುಪೇರುಗಳೆಲ್ಲವೂ ಅಳಿದ ಸಂತೃಪ್ತ ಸ್ಥಿತಿ ಅವರದ್ದು. ಅಂತಹಾ ಆತ್ಮಸುಖಿಗಳವರು. ಕೆಲವರಿಗೆ ನಿದಿರೆಯೇ ಬಾರದು ! ನಿದಿರೆಗಾಗಿ ಮದಿರೆ ! ಆತ್ಮಸುಖದ ಮಾತೆಲ್ಲಿ ? ನಿದಿರೆಯಲ್ಲೆಂತೋ , ಎಚ್ಚರದಲ್ಲೂ ಅಂತೆಯೇ ಬದುಕಿನ ಏರುಪೇರುಗಳನ್ನು ಸಮಾನವಾಗಿ ಸ್ವೀಕರಿಸಿ, ಶಾಂತವಾಗಿ ಬದುಕಿದರೆಷ್ಟು ಚಂದ ! ಅಂತಹಾ ಪುಣ್ಯಾತ್ಮರು ಎಲ್ಲೋ ಕೆಲವರು ಮಾತ್ರ. ನಾನು ನನ್ನದೆಂಬ ಅಹಂಕಾರ , ಮಮಕಾರಗಳು ಅಳಿದ ಆನಂದ ಸಹಜಾನಂದ. ಸದಾ ಅಂತಹಾ ಸ್ಥಿಯಲ್ಲೇ ಬದುಕಲು ಸಾಧ್ಯ ! ಆದರೆ ಅದಕ್ಕೆ ಸಾಧನೆ ಅಗತ್ಯ. ಹಂತಹಂತವಾಗಿ ಅಂತಹಾ ಸಾಧಕರು ನಾವಾಗಬೇಕು ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021