ಹಿರಿಕಿರಿಯದಾವುದಿದೆ
ದೇವನೊಳು ಧರ್ಮದೊಳು ?
ಮಸಣದೊಳಗೊಂದೆ ಕಾಣ್
ಬಡವ ಬಲ್ಲದರು !
ಎಲ್ಲವನು ಮೀರಿದವ
ದೇವನಾಗುವ ದಿಟದಿ
ಪರಮಾತ್ಮ ತತ್ತ್ವಮಿದು
ಜಾಣಮೂರ್ಖ //
ಉಚ್ಚ ನೀಚಾದಿ ಭಾವನೆಗಳಿಂದ ಮುಚ್ಚಿ ಹೋಗಿಬಿಟ್ಟಿದ್ದೇವೆ ನಾವು. ಆ ದೇವರು ಇಷ್ಟು ಸಾಲ ಪಡೆದ ! ಇನ್ನೂ ತೀರಿಸಿಲ್ಲ ! ಅವನಿಗಿಷ್ಟು ಕೊಡೋಣವೆಂಬ ಭಾವ ! ಎಂತದಿದು ವಿಕೃತಿ ! ಹಾಗಾದರೆ ನಮಗೆ ಕೊಟ್ಟವನಾರು ? ತಿರುಪತಿಯ ಶ್ರೀನಿವಾಸ ಶ್ರೀಮಂತ ದೇವರು ಎನ್ನುವವರನ್ನು ಕೇಳಿದ್ದೇನೆ. ಹಾಗಾದರೆ ಭಕ್ತರು ಕೇಳಿದ್ದನ್ನೆಲ್ಲಾ ಕೊಟ್ಟು ಬೋಳಾಶಂಕರನೆನಿಸಿಕೊಂಡ ಮಸಣವಾಸಿ ಶಿವ ಬಡವನೇ ? ಕೇಳಿದ್ದನ್ನೆಲ್ಲಾ ಕೊಡುವ ಶಿವ ಎಂತು ಬಡವನಾದಾನು ? ಅಂತೆಯೇ ಧರ್ಮಗಳೆಲ್ಲದರ ಸಾರವೊಂದೆ. ಅದು ಉಚ್ಚ ಇದು ನೀಚ ಇದೆಲ್ಲಾ ನಾವು ಮಾಡಿಕೊಂಡದ್ದಷ್ಟೆ. ಬಡವ ಬಲ್ಲಿದರೆಲ್ಲರೂ ಮಸಣದೊಳಗೆ ಒಂದೇ ಅಲ್ಲವೇ !? ಇವೆಲ್ಲವನ್ನೂ ಮೀರಿ ನಿಂತವನು ದೇವನು. ಮಾನವನಾಗಿ ಹುಟ್ಟಿ ಇವೆಲ್ಲವನ್ನೂ ಮೀರಿನಿಂತವನು ದೇವನೇ ಆಗಿಬಿಡುತ್ತಾನೆ. ಇದೇ ಪರಮಾತ್ಮ ತತ್ತ್ವವು. ಮನೋವಿಕಾರಗಳನ್ನು ಕಳೆದು ಆ ಎತ್ತರಕ್ಕೆ ಏರಬೇಕಿದೆಯಷ್ಟೆ. ಏನಂತೀರಿ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021