ಅರಿವರ್ಗಗಳನಿರಿದು
ಅರಿತರಿತು ನಡೆಯಲದು
ಘನ ತಪಕು ಮಿಗಿಲುಗಾಣ್
ಬದುಕು ತಪಮಲ್ತೆ !
ಕಾಮಕ್ರೋಧಾದಿಗಳ
ದಮನಿಸದ ತವಸಿ ತಾ
ನೆಂತು ಬೆಳಗುವನೊಳಗ
ಜಾಣಮೂರ್ಖ //
ಅರಿಷಡ್ವರ್ಗಗಳ ಜೊತೆ ಹೋರಾಟವೇ ಈ ಬದುಕು. ಅವುಗಳನ್ನು ಹಿಡಿತದಲ್ಲಿಟ್ಟುಕೊಂಟು ಸಮತೋಲನದ ಬದುಕು ಸಾಗಿಸುವುದು ನಿಜವಾದ ತಪಸ್ಸು ! ಕಾಡಿಗೆ ಹೋಗಿ ತಪವನಾಚರಿಸುವುದಲ್ಲ. ಹಾಗೆ ತಪಸ್ವಿಗಳಾದವರೂ ಕಾಮ ಕ್ರೋಧಾದಿಗಳಿಂದ ಹೊರತಾದವರೇನಲ್ಲ. ಹಾಗೆ ಇವನ್ನು ಆಂತರ್ಯದಲ್ಲಿ ದಮನಿಸದವರು ಎಂತು ತವಸಿಗಳಾದಾರು !? ತನ್ನ ಅಂತರಂಗವನ್ನು ಹೇಗೆ ಬೆಳಗುವರು ? ತನ್ನಂತರಂಗವನ್ನೇ ಬೆಳಗದವರು ಜಗಕೆಂತು ಬೆಳಕ ನೀಡುವರು ?! ಅಲ್ಲವೇ ಗೆಳೆಯರೇ ? ಯಾರು ಸಂಸಾರಜೀವನದಲ್ಲಿದ್ದುಕೊಂಡೇ ತಾನೂ ಬೆಳಗಿ ಜಗತ್ತನ್ನೂ ಬೆಳಗುವರೋ ಅವರೇ ನಿಜವಾದ ತವಸಿಗಳು, ಯೋಗಿಗಳು! ಅದಕ್ಕೆ ದಾಸವರೇಣ್ಯರಾದ ಪುರಂದರದಾಸರು-“ಪಿತಮಾತೆ ಸತಿಸುತರ ಅಗಲಿರಬೇಡ
ಯತಿಯಾಗಿ ಅರಣ್ಯವ ತಿರುಗಲಿಬೇಡ
ವ್ರತ ನೇಮವ ಮಾಡಿ ದಣಿಯಲುಬೇಡ
ಸತಿಯಿಲ್ಲದವಗೆ ಸದ್ಗತಿಯಿಲ್ಲವೋ ಮೂಢ ! ಎಂದದ್ದಾರೆ. ಅದೆಷ್ಟು ಸತ್ಯ ಈ ಅನುಭಾವಿಕ ನುಡಿ ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021