ಇಟ್ಟು ಕೊಳೆಸುವೆಯೇಕೆ
ಕೊಟ್ಟು ಗಳಿಸೈ ಕೆಳೆಯ !
ದುಃಖದೊಳಗಿಹರೆಲ್ಲ !
ಕರಗದೇ ಹೃದಯ !?
ಬರಿಗೈಯ್ಯ ಪಯಣಕ್ಕೆ
ಭ್ರಾಂತಿಯೇತಕೆ ಪೇಳು ?
ದುಃಖಿಯಾ ದುಃಖ ಕಳೆ
ಜಾಣಮೂರ್ಖ //
ಹರಿ ಕೊಟ್ಟ ಕಾಲಕ್ಕೆ ಕರೆದು ದಾನವ ಮಾಡು ಎಂದಿದ್ದಾರೆ ಪ್ರಾಜ್ಞರೂ, ಅಧ್ಯಾತ್ಮಿಕ ಚಿಂತಕರೂ ಆದ ದಾಸರು. ಆದರೆ ಇಂದಾಗುತ್ತಿರುವುದೇನು ? ನಾವು ಕೂಡಿಟ್ಟು ಕೂಡಿಟ್ಟು ಕೊಳೆಸುತ್ತಿದ್ದೇವೆ. ಹಾಗಾದರೆ ಭವಿಷ್ಯಕ್ಕೆ ಕೂಡಿಡುವುದು ತಪ್ಪೇ? ಎಂಬ ಪ್ರಶ್ನೆ ಏಳುವುದು ಸಹಜ. ಕೂಡಿಡುವುದು ತಪ್ಪಲ್ಲ. ಮಿತಿಮೀರಿ ಕೂಡಿಟ್ಟು ಕೊಳೆಸುವುದು ತಪ್ಪು. ಲೌಕಿಕ ಸಂಪತ್ತನ್ನು ಕೂಡಿಟ್ಟು ಏನು ಗಳಿಸುವಿರಿ ? ಅಧ್ಯಾತ್ಮಿಕ ಸಂಪತ್ತನ್ನು ಕೂಡಿಡಿ. ಚಿರ ಸಂತಸವ ಪಡೆಯಿರಿ. ಹಾಗಾದರೆ ದುಡಿದು ಗಳಿಸಿದುದನೆಲ್ಲ ಕೊಟ್ಟು ಬಿಡಬೇಕೆ ? ಎನಿಸುವುದು ಸಹಜ. ಯಾರು ಯಾರಿಗೋ ಏಕೆ ಕೊಡುವಿರಿ !? ನಿಮ್ಮವರು ಎನಿಸಿಕೊಂಡವರು ದುಃಖದಲ್ಲಿದ್ದಾರೆ ಎಂದು ತಿಳಿದಾಗ ಕೊಡಿ. ನೀವು ಅವರ ಪಾಲಿಗೆ ದೇವರಾಗಿಬಿಡುತ್ತೀರಿ. ಕೊಟ್ಟದ್ದು ನಿಮಗೆ ಬಂದೇ ಬರುತ್ತದೆ. ಸಂದೇಹ ಬೇಡ. ಇದು ಜಗತ್ತಿನ ಅಂತೆಯೇ ದೈವದ ನಿಯಮ ಕೂಡ. ಕೆಲ ದಿನದ ಪಯಣದ ತರುವಾಯ ಕೋಟಿ ಕೋಟಿ ತುಂಬಿದ್ದರೂ ಬರಿಗೈಯ್ಯ ಪಯಣವೇ ನಿನ್ನದು ! ಮರೆಯದಿರಯ್ಯ ! ಒಂದು ವೇಳೆ ನಮ್ಮನ್ನು ಮರಣದ ನಂತರ ವಜ್ರಖಚಿತವಾದ ಚಟ್ಟವೇರಿಸಿ ಮಸಣದ ವರೆಗೂ ಕೊಂಡೊಯ್ಯಬಹುದು ! ಜೈಕಾರ ಮುಗಿಲು ಮುಟ್ಟುವಂತೆ ಕೂಗುತ್ತಾ! …….. ಆಮೇಲೆ ! ಯಾರಾದರೂ ನಿನ್ನ ಜೊತೆಗೆ ಬಂದಾರೆ !? ಊಹುಂ !!!! ಒಂಟಿ ನಿನ್ನಾತ್ಮ ಕೇಳು. ಈ ಬಾಳಿಗೆ ಇಷ್ಟೊಂದು ಭ್ರಾಂತಿಯೇ ? ಮರೆಯದಿರು. ಮೊದಲು ಸಾಧ್ಯವಾಗುವಂತಿದ್ದರೆ ನಿನ್ನ ಸುತ್ತಲಿನ ದುಃಖಿಗಳ ದುಃಖ ಕಳೆಯಯ್ಯಾ ಗೆಳೆಯ. ಅದೇ ನಿಜವಾದ ದೈವಾರಾಧನೆ. ಅದೇ ದೈವ ಕಾರ್ಯ. ಬರೀ ಅಭಿಷೇಕ , ಅರ್ಚನೆ , ಪೂಜೆ ಪುನಸ್ಕಾರಾದಿಗಳಿಂದ ಏನೂ ಪ್ರಯೋಜನವಾಗದು. ಇನ್ನೊಂದು ದುಃಖಿತ ಆತ್ಮವು ನಿನ್ನಿಂದ ದಡ ಸೇರಿದರೆ ಅದಕ್ಕಿಂತಲೂ ಪುಣ್ಯಕಾರ್ಯ ಬೇರೇನಿದೆ ?
ವ್ಯರ್ಥಕಾಲ ಕಳೆಯಬೇಡ
ಸ್ವಾರ್ಥದಿಂದ ಬದುಕಬೇಡ
ಅರ್ತಿಯಿಂದ ವಿಠ್ಠಲನ್ನ
ಭಜಿಸಿ ಮುಕ್ತನಾಗೊ ಮನುಜ !
ಪುರಂದರದಾಸರ ಈ ಮಾತು ಎಷ್ಟು ಸತ್ಯ ಅಲ್ಲವೇ ?!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021