ದಾಸ್ಯಮೆಂತದು ಬುವಿಯ
ಲಿಷ್ಟಿಷ್ಟಕೂ ಜಗದಿ
ಹಾಸ್ಯಕೀಡಾಗುವುದು
ತರವೆ ನೀ ಪೇಳು !?
ಘನಮಾದುದಿದೆ ಬಿಡದೆ
ಮನ ತುಂಬಿ ದಾಸನಾ
ಗದೆ ಮುಕ್ತಿಗಾಧಾರ
ಜಾಣಮೂರ್ಖ //
ನಾವು ಈ ಜಗತ್ತಿನಲ್ಲಿ ತೀರಾ ಕ್ಷುಲ್ಲಕವಾದುದಕ್ಕೆಲ್ಲಾ ದಾಸರಾಗಿಬಿಡುತ್ತೇವೆ. ಹಣಕ್ಕೆ ! ಅಧಿಕಾರಕ್ಕೆ ! ಕೆಲವು ಕ್ಷುಲ್ಲಕವಾದ ಚಟಗಳಿಗೆ ಹೀಗೆ ಏನೇನಕ್ಕೋ ನಮ್ಮ ವ್ಯಕ್ತಿತ್ವವನ್ನೇ ಒತ್ತೆಯಿಟ್ಟುಬಿಡುತ್ತೇವೆ. ಆತ್ಮಗೌರವವನ್ನೇ ಕೊಂದುಕೊಂಡು ಬಿಡುತ್ತೇವೆ. ಹಾಸ್ಯಕ್ಕೀಡಾಗುತ್ತೇವೆ. ಬೇರೆಯವರ ಕತೆ ಹೋಗಲಿ ನಮ್ಮ ಮನಸ್ಸೇ ನಮ್ಮನ್ನು ಕಂಡು ಅಸಹ್ಯ ಪಡುವಷ್ಟರ ಮಟ್ಟಿಗೆ ದಾಸ್ಯತ್ವವನ್ನು ಅನುಭವಿಸುತ್ತೇವೆ. ಏಕೆ ಹೀಗೆ ? ಘನವಾದುದು ಈ ಸೃಷ್ಠಿ ! ಮತ್ತೆ ಸೃಷ್ಠಿ , ಸ್ಥಿತಿ ಲಯಕಾರಕ ದಿವ್ಯ ಶಕ್ತಿಗಳು ! ಆ ದಿವ್ಯ ಭವ್ಯ ಶಕ್ತಿಯನ್ನು ಗಮನಿಸುವುದೇ ಇಲ್ಲ. ಅಂತಹಾ ದಿವ್ಯಶಕ್ತಿ ಅರ್ಥಾತ್ ಭಗವಂತನಿಗೆ ದಾಸನಾಗಯ್ಯ ಗೆಳೆಯ. ಅದು ಮುಕ್ತಿಗೆ ಆಧಾರವಾದರೂ ಆಗುತ್ತದೆ. ಅದು ಬಿಟ್ಟು ಸಣ್ಣಸಣ್ಣದಕ್ಕೂ ದಾಸನಾಗಿ ಯಾತನೆ , ನೋವುಗಳನ್ನು ಅನುಭವಿಸುವುದಕ್ಕಿಂತ ಘನನಾದ ಭಗವಂತನ ದಾಸನಾಗಿ ವಿಶೇಷನಾಗುವುದು , ಮುಕ್ತನಾಗುವುದು ಸರಿಯಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021