ಕಾಣದಾ ಮಕರಂದ
ಕೆಳಸಿ ದುಂಬಿಯ ದಂಡು !
ಅರಸಿ ಪರಿಮಳದರಸಿ
ಕಂಡೊಡನೆ ಮುದದಿ
ಹೂವೇನು ! ದುಂಬಿಯೇನ್ ?
ಭೇದವಳಿವಂದದೊಲು
ಭಕ್ತ ಭಗವಂತ ಕಾಣ್
ಜಾಣಮೂರ್ಖ //
ದುಂಬಿಯ ದಂಡು ಮುಂಜಾನೆ ಮಕರಂದವನ್ನು ಅರಸಿ ಹೊರಡುತ್ತದೆ. ಹೂ ಕಾಣುತ್ತದೆಯಾದರೂ ಮಕರಂದವು ಯಾರ ಕಣ್ಣಿಗೂ ಕಾಣದು. ಅದೇ ದೈವತತ್ತ್ವ ! ಭಗವಂತನ ವಿಗ್ರಹ ಕಾಣುತ್ತದೆ. ಆದರೆ ಭಗವಂತ ಕಾಣನು. ಹೂವು ಕಂಡೊಡನೆ ಅದರೊಳಗಿನ ಮಕರಂದದೊಡನೆ ದುಂಬಿ ಮುದದಿಂದ ಸವಿದು ಸೇರಿಹೋಗುತ್ತದೆ. ತನ್ನ ಮತ್ತು ಹೂವಿನ ಭೇದವೇ ಅದಕ್ಕೆ ಮರೆತು ಹೋಗುತ್ತದೆ. ಅಂತಹಾ ತದಾತ್ಮ್ಯ ಭಾವ ಮೂಡಿ ಸಗ್ಗವೇ ಸೃಷ್ಠಿಯಾಗುತ್ತದೆ. ಅದೆಷ್ಟು ಸುಂದರ ಅವೆರಡರ ಬದುಕು ! ವಿಗ್ರಹಕ್ಕೆ ಬಾಗುವುದಿರಲಿ ಗೆಳೆಯ ,ಮೊದಲು ಅದರೊಳಗಿನ ದೈವ ತತ್ತ್ವವನ್ನು ಗುರುತಿಸೋಣ. ಬಲ್ಲವನೇ ಬಲ್ಲ ಬೆಲ್ಲದ ಸವಿಯ ಅಲ್ಲವೇ !? ಹಾಗೆಯೇ ಭಗವಂತ ಮತ್ತು ಅವನನ್ನು ಎಲ್ಲೆಲ್ಲೋ ಅರಸುವ ನಾವು. ಅವನ ಇರುವಿಕೆಯ ಸುಳುಹು ದೊರೆತೊಡನೆಯೇ ಭೇದ ಮರೆತು ತದಾತ್ಮ್ಯ ಭಾವದಲ್ಲಿ ಒಂದಾಗಿ ಸೇರಿಹೋಗಬೇಕು. ಅದೇ ನಿರ್ಮಲ ಭಕ್ತಿ. ಭೇದವಳಿದ ಆ ಸ್ಥಿತಿ ! ಪದಗಳಿಗೆ ನಿಲುಕವು. ಅನುಭವಿಸಿಯೇ ಕಾಣಬೇಕು. ದುಂಬಿ ಕಾಣದ ಮಕರಂದವನ್ನು ಗುರುತಿಸುವಂತೆ ನಾವು ಕಾಣದ ಭಗವಂತನ ಇರುವಿಕೆಯನ್ನು ಗುರ್ತಿಸುವವರಾಗಬೇಕು. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021