ಬೆವರ ಹಾರವ ನೀಡಿ
ಬವರವೇತಕೊ ಕಾಣೆ
ಬುವಿಯಮ್ಮ ನಗುವಳೋ
ಬವಣೆಗಳ ಕಂಡು !
ಕಸವರಕೆ ಕಾದುವರು
ಜಸವರಸಿ ಓಡುವವ
ರಿವಳನೆಂತರಿವರೋ
ಜಾಣಮೂರ್ಖ //
ನಾವು ಬೆವರು ಸುರಿಸಿ , ಕಷ್ಟ ಪಟ್ಟು ದುಡಿಯುತ್ತೇವೆ. ಆದರೂ ಬದುಕಿಗಾಗಿ ಯುದ್ಧವನ್ನೇ ಮಾಡುತ್ತೇವೆ. ಅದೆಷ್ಟು ಬವಣೆಗಳು ! ಭೂತಾಯಿ ಇದನ್ನು ಕಂಡು ನಗುತ್ತಾಳೆ. ದುಡಿಮೆಗೆ ತಕ್ಕ ಪ್ರತಿಫಲ, ಬದುಕು ಇದ್ದೇ ಇರುತ್ತದೆ. ಆದರೂ ಹಣ, ಆಸ್ತಿಗಾಗಿ ಹೋರಾಟ ! ಯಶಸ್ಸಿಗಾಗಿ ಹಾರಾಟ ! ಪ್ರಾಮಾಣಿಕವಾಗಿ ದುಡಿದು ಸಂತೃಪ್ತಿಯಿಂದ ಬದುಕುವುದು ಯಾವಾಗ ? ಭೂತಾಯಿಯ ಬದುಕನ್ನೊಮ್ಮೆ ನೋಡಿ ಏನಾದರೂ ತನ್ನ ಕರ್ತವ್ಯವನ್ನವಳು ಬಿಡಳು . ಅಪಾರ ಸಂಪತ್ತಿನ ಗಣಿಯಿವಳು ! ಆದರೂ ಎಲ್ಲವನ್ನೂ ತನ್ನ ಮಕ್ಕಳಿಗೆ ಕೊಟ್ಟು ಸಲಹುತ್ತಿದ್ದಾಳೆ . ಅದೆಂತಹಾ ತಾಳ್ಮೆ ! ಅದೆಷ್ಟು ಸಹನೆ ! ಚಿಕ್ಕದನ್ನೂ ದೊಡ್ಡದನ್ನಾಗಿಸಿ ಕೊರಗುವ ನಾವು ಸ್ವಲ್ಪ ಶಾಂತರಾಗಿ ಚಿಂತಿಸೋಣ. ಈ ತಾಯಿಯಿಂದ ಕಲಿಯಬೇಕಾದದ್ದು ಬಹಳವಿದೆ. ಬದುಕಿನಲ್ಲಿ ತಿನ್ನುವ ಇಷ್ಟು ಅನ್ನಕ್ಕಾಗಿ ಏಕಿಷ್ಟು ಉದ್ವೇಗ ! ಸ್ವಾರ್ಥ! ಹೋರಾಟ! ಹಾರಾಟ ! ಯುದ್ಧವೋ ನಾ ಬೇರೆ ಕಾಣೆ. ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021