ಬೇಡುತಿಷ್ಟಾರ್ಥಗಳ
ಕೊಡುವೆಯೇನಭವಂಗೆ
ಇಟ್ಟುದೆಲ್ಲವು ದೇವ
ಕೊಟ್ಟುದೇ ತಾನೆ !?
ಏನ ಕೊಟ್ಟೆಂಬುದಿರ
ಲೆಂತು ಕೊಟ್ಟದ ಪೇಳು
ಕೊಟ್ಟ ಭಾವವದೆಂತೊ
ಜಾಣಮೂರ್ಖ //
ಭಗವಂತನ ಬಳಿ ನಾವೆಲ್ಲಾ ಯಾಚಕರೇ. ಆಳಾಗಲಿ , ಅರಸನಾಗಲಿ ! ಯಾರಾದರೂ ಸರಿಯೇ. ಆದರೆ ಅವನಿಗೆ ನಾವೇನು ಕೊಡಲು ಸಾಧ್ಯ ದೇವನಿಗೆ ? ಹಣ್ಣು, ಕಾಯಿ , ಕಡ್ಡಿ , ಕರ್ಪೂರ , ಚಿನ್ನ, ಬೆಳ್ಳಿ ಏನೇ ಅರ್ಪಿಸಿದರೂ ಅದೆಲ್ಲವೂ ಭಗವಂತ ಕೊಟ್ಟುದೇ ಅಲ್ಲವೇ ? ಆದ್ದರಿಂದ ನಾವು ಅವನಿಗೆ ಏನು ಅರ್ಪಿಸಿದೆವು ಎಂಬುದಕ್ಕಿಂತ ಹೇಗೆ ಅರ್ಪಿಸಿದೆವು ಎಂಬುದೇ ಮುಖ್ಯ. ಇಲ್ಲಿ ಕೊಡುವ ನಮ್ಮ ಮನಸ್ಸಿನ ಭಕ್ತಿ , ಭಾವಗಳೇ ಮುಖ್ಯ. ‘ನಾನು’ ಕೊಟ್ಟೆನೆಂಬ ಭಾವ ಲವಲೇಶ ಮಾತ್ರವೂ ಸುಳಿಯಬಾರದು. ಅವನು ಭಕ್ತಿಪರಾಧೀನ. ಭಕ್ತರ ಬಂಧು. ಭೌತಿಕವಾದುದೇನನ್ನೂ ಅವನು ಗಣಿಸನು. ಆದರೆ ಹಣ್ಣಿಗಿಂತ ಹಣ್ಣಾದ ನಮ್ಮ ಮನಸ್ಸು !ಕಾಯಿಗಿಂತ ಕಾಯವನ್ನು ಸೇವೆಗೊಪ್ಪಿಸುವ ಪರಿಯೇ ಅವನಿಗೆ ಮುಖ್ಯ. ಏನಂತೀರಿ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021