ಆವುದೈ ಶ್ರೇಷ್ಠ ಮೇ
ಣಾವುದು ಕನಿಷ್ಠವೈ !?
ವಿಕಲಮನ ಸೃಷ್ಠಿಗಾ
ಧಾರಮೇನ್ ಪೇಳು ?
ದುಃಖವೇ ಸುಖವಾಗಿ
ಸತ್ಯ ತಾ ಸುಳ್ಳಾಗಿ
ಬೆಮೆಯ ಬದುಕೆಂತದಿದು
ಜಾಣಮೂರ್ಖ //
ಈ ಶ್ರೇಷ್ಠ ಕನಿಷ್ಠಾದಿ ಭೇದಗಳ ಕರ್ತೃಗಳು ನಾವೇ. ಇವು ನಮ್ಮ ಈ ವಿಕಲ ಮನದ ಸೃಷ್ಠಿಯಷ್ಟೆ. ಇದಕ್ಕೆ ಆಧಾರವೇನು ? ವ್ಯಕ್ತಿಯೋರ್ವನ ಶ್ರೇಷ್ಠತ್ವಕ್ಕೆ ಕಾರಣವಾದ ಶ್ರೇಷ್ಠತ್ವ ಬೇರೊಂದು ಇರಲೇಬೇಕಲ್ಲವೇ ? ಹೋಗಲಿ ಸೃಜನ ಶೀಲತೆಯೆನ್ನುವುದಾದರೆ ಅಂತಹ ಗುಣಕ್ಕೆ ಪ್ರೇರಕಶಕ್ತಿ ಏನಾದರೂ ಇರಲೇಬೇಕಲ್ಲವೇ ? ಹೀಗೇ ಯೋಚಿಸುತ್ತಾ ಸಾಗಿದರೆ ಸತ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಆದರೆ ಭ್ರಮೆಯ ಬದುಕಿನಲ್ಲಿ ನಾವು ಬದುಕುತ್ತಿದ್ದೇವೆ. ಭ್ರಮೆಯನ್ನೇ ವಾಸ್ತವ, ಸಹಜ, ಸ್ವಾಭಾಭಾವಿಕವೆಂದುಕೊಂಡು ಬದುಕುತ್ತಿರುವ ಸ್ಥಿತಿ ನಮ್ಮದಾಗಿದೆ. ಇದೊಂದು ವಿಪರ್ಯಾಸವೇ ಸರಿ. ದುಃಖವನ್ನೇ ಸುಖವೆಂದು ಸ್ವೀಕರಿಸಿ ಬಳಲಿ ಬೆಂಡಾಗುತ್ತಾ ! ಅಸತ್ಯವನ್ನೇ ಸತ್ಯವೆಂದು ನಂಬುತ್ತಾ ಈ ಪರಂಪರೆಗೇ ಹೊಂದಿಕೊಂಡು ನಾವಿಂದು ಬದುಕುತ್ತಿಲ್ಲವೇ ? ಇದು ಸಹಜವೇ ? ಸ್ವಾಭಾವಿಕವೇ ? ಆದರೆ ವಾಸ್ತವ ಬದುಕಿನ ಚಿತ್ರಣವಿದು. ಇದರ ಒಳಹೊಕ್ಕು ಸತ್ಯಾಸತ್ಯತೆಗಳನ್ನು ತಿಳಿಯಬೇಕಾದವರು ನಾವು. ಭ್ರಮೆಯ ಬದುಕಿನಿಂದ ಹೊರಬಂದು ನಮ್ಮನ್ನು ನಾವೇ ಎಳೆ ಎಳೆಯಾಗಿ ವಿಶ್ಲೇಷಿಸಿ ನೋಡಬೇಕಾದ ಅಗತ್ಯವಿದೆ. ಏನಂತೀರಿ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021