ಕಡಲ ಮತ್ಸ್ಯವು ಕಡಲ
ಭವ್ಯತೆಯ ಕಾಣದೆಲೆ
ಮನದಿ ಚಿಂತೆಯ ತಳೆದು
ದುಃಖಿಸುವ ತೆರದಿ !
ಕಾಣ್ವೆಡೆಯೊಳಲ್ಲಲ್ಲೆ
ಕಾಣ್ವ ದೇವನ ಕಾಣ
ದಂತ ಮೇಳವ ಕಾಣೊ
ಜಾಣಮೂರ್ಖ //
ಸಮುದ್ರದಲ್ಲೇ ಇರುವ ಮೀನೊಂದು ಸಮುದ್ರದ ಭವ್ಯತೆಯನ್ನು ನೋಡಲು ತವಕಿಸಿ ಮನಸ್ಸಿನಲ್ಲಿ ಚಿಂತೆಗೊಳಗಾಯ್ತು. ತನ್ನವರನ್ನಲ್ಲಾ ಕೇಳಿತು. ಕಡಲೆಂದರೆ ಹೇಗಿರುತ್ತದೆ ಎಂದು ! ಈ ಮೀನಿನ ಸ್ಥಿತಿಯೇ ಅವುಗಳದ್ದೂ ಸಹ ! ಅವುಗಳೂ ಕೂಡ ತಾವು ಕಂಡಿಲ್ಲವೆಂದೇ ಹೇಳಿದವು. ತಮ್ಮ ಬದುಕಿಗೆ ಮೂಲಾಧಾರವಾದ ಕಡಲಿನೊಳಗೇ ಇದ್ದು , ಕಡಲ ಕಾಣಬೇಕೆಂದು ತವಕಿಸಿ , ದುಃಖಿಸುವ ಮೀನಂತೆಯೇ ನಾವು ಸಹ ! ಅಲ್ಲವೇ ಗೆಳೆಯರೇ ! ಸ್ವಲ್ಪ ಆಳವಾಗಿ ಚಿಂತಿಸಿ. ನಾವೆಲ್ಲರೂ ಆ ಭಗವಂತನ ಜೊತೆಯಲ್ಲೇ ಇದ್ದೇವೆ. ನೋಡಬೇಕೆಂದ ಕಡೆಯೆಲ್ಲಾ ಅವನು ಗೋಚರಿಸುತ್ತಾನೆ. ಭಗವದಾನಂದವನ್ನು ನೀಡುತ್ತಾನೆ. ಆದರೆ ಜಗದ ಮಾಯಾಪಾಶಕ್ಕೆ ಬಲಿಯಾಗಿ ಆ ಆನಂದವನ್ನು ಅನುಭವಿಸುವಲ್ಲಿ ನಾವು ವಿಫಲರಾಗುತ್ತೇವೆ ಅಷ್ಟೆ. ಅವನ ಜೊತೆಯಲ್ಲೇ ಇದ್ದು ಅವನನ್ನು ಕಾಣಲು ಪರಿತಪಿಸುತ್ತೇವೆ. ತಪಸ್ಸು ಮಾಡುತ್ತೇವೆ. ಕಾಣ್ವ ಕಣ್ಣಿರುವವರಿಗೆ ಭಗವಂತ ಬಣ್ಣ , ರುಚಿ , ಶಬ್ದ ಇತ್ಯಾದಿಗಳೆಲ್ಲವುಗಳಲ್ಲೂ ಕಾಣುತ್ತಾನೆ. ಹೂವನ್ನು ನೋಡಬಹುದಾದರೂ ಹೂವಿನ ಸುಗಂಧವನ್ನು ನೋಡಲು ಸಾಧ್ಯವೇನು ? ಅನುಭವಿಸಬೇಕಷ್ಟೆ ! ಹಾಗೆಯೇ ಪ್ರಪಂಚದ ಚರಾಚರ ವಸ್ತುಗಳೆಲ್ಲದರಲ್ಲೂ ಇರುವ ಭಗವಂತನ ಅಸ್ತಿತ್ವವನ್ನು ಅನುಭವಿಸಿದಾಗಲೇ ಗೊತ್ತಾಗುವುದು. ಬಲ್ಲವನೇ ಬಲ್ಲ ಬೆಲ್ಲದಾ ಸವಿಯ ! ಏನಂತೀರಿ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021