ತೋಳ ಹಳ್ಳಕೆ ಬೀಳ್ದ
ರಾಳಿಗೊಂದೆಸೆಗಲ್ಲು
ಪೇಳರೇಕವರ ಬಾ
ಳ್ಬಂಗಗಳ ಹುಳುಕ ?
ತಾಳ್ಮರುಳೆ ಲೋಗರೊಳ
ಹುಳುಕುಗಳು ಇರಲಂತೆ
ತೊಳೆ ಮೊದಲು ನಿನ್ನೊಳಹ
ಜಾಣಮೂರ್ಖ //
ನಾವೆಷ್ಟು ವಿಚಿತ್ರ ಎಂದರೆ ಬೇರೆಯವರೊಂದಿಗೆ ನಮ್ಮನ್ನು ಹೋಲಿಸಿಕೊಂಡು ಬದುಕುವುದರಲ್ಲೇ ಬಹುಕಾಲ ಕಳೆದುಬಿಡುತ್ತೇವೆ. ಆ ಬದುಕಿನ ಹಾದಿಯಲ್ಲಿ ನೆರೆ ಹೊರೆಯವರ , ಬಂಧು ಬಾಂಧವರ ಒಂದೇ ಒಂದು ಸಣ್ಣ ದೋಷ ಸಿಕ್ಕಿಬಿಟ್ಟರೆ ಸಾಕು ಅದೇನೋ ದೊಡ್ಡ ಪ್ರಮಾದವೆಂಬಂತೆ ಬಿಂಬಿಸಿ ತುಂಬಾ ವಿಕೃತವಾದ ಸಂತೋಷ ಪಡುತ್ತೇವೆ. ಆದರೆ ನಮ್ಮ ಬಾಳಿನ ಹುಳುಕುಗಳನ್ನು ತುಂಬಾ ಗೌಪ್ಯವಾಗಿ ಮುಚ್ಚಿಡುತ್ತೇವೆ. ಏನೂ ನಡೆದೇ ಇಲ್ಲವೆಂಬಂತೆ ಇದ್ದುಬಿಡುತ್ತೇವೆ. ಅವರು ಹಾಗೆ , ಇವರು ಹೀಗೆ ಎಂದಾಡುವುದಕ್ಕಿಂತ ನಾನೆಂತು ಬದುಕಿದ್ದೇನೆ ಎಂದು ಬಂದ ಹೆಜ್ಜೆ ಗುರುತುಗಳನ್ನು ಒಮ್ಮೆ ಹಿಂತಿರುಗಿ ನೋಡಯ್ಯ ಗೆಳೆಯ ! ಇತರರ ಬದುಕು ಹೇಗಾದರೂ ಇರಲಿ ನಿನ್ನ ಅಂತರಂಗವನ್ನು ಒಮ್ಮೆ ನೀನು ಶುದ್ಧಿಗೊಳಿಸಿಕೊ! ಅಷ್ಟು ಸಾಕು. ಅದೇನೋ ಅನ್ನುವರಲ್ಲ ತೋಳ ಹಳ್ಳಕೆ ಬಿದ್ದರೆ ಆಳಿಗೊಂದೆಸೆಗಲ್ಲು ಎನ್ನುವ ಹಾಗೆ ನಮ್ಮ ಮಾತುಗಳಿಂದ ಅನ್ಯಥಾ ಇತರರ ಮನಸ್ಸಿಗೆ ನೋವುಂಟು ಮಾಡದೆ ಒಳ್ಳೆಯ ಮಾತುಗಳನ್ನಾಡಿ , ಸಾಧ್ಯವಾದರೆ ನೊಂದವರ ಬದುಕಿಗೊಂದಿಷ್ಟು ಸ್ಪೂರ್ತಿ ನೀಡೋಣ. ಇಲ್ಲದಿದ್ದರೆ ಸುಮ್ಮನಿದ್ದುಬಿಡೋಣ. ಕೆದಕಿ ನೋಯಿಸುವುದರಿಂದ ಸಿಗುವ ಲಾಭವಾದರೂ ಏನು ? ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021