ತಿಪ್ಪೆಯೊಳಗೊಪ್ಪದಿಂ
ಬೆಳೆದ ವಳ್ಳಿಯ ಒಡಲ
ಪೂವಿನೊಳಗೇಂ ಕಂಪು
ವೆಂತ ವೈಚಿತ್ರ್ಯ !
ಸಕಲ ಸಿರಿಯಿರಲೇನು
ಭಾವಸಿರಿ ಇರದಿರಲು
ಲೇಸೊ ತಿಪ್ಪೆಯ ವಳ್ಳಿ
ಜಾಣಮೂರ್ಖ //
ಸ್ನೇಹಿತರೇ , ತಿಪ್ಪೆಯನ್ನು ಕಂಡರೆ ನಮಗೆಲ್ಲಾ ಎಂತಹುದೋ ಅಸಹ್ಯ ! ಆದರೆ ಆ ತಿಪ್ಪೆಯ ಗೊಬ್ಬರ ಹಾಕಿಯೇ ಬೆಳೆದ ಸೊಪ್ಪಿನ ಸಾರು , ಸಾರ ಎರಡನ್ನೂ ಚಪ್ಪರಿಸಿಕೊಂಡು ಸವಿಯುತ್ತೇವೆ ! ಎಂತಹಾ ವಿಪರ್ಯಾಸ ಅಲ್ಲವೆ !? ಹಾಗೇನೇ ತಿಪ್ಪೆಯ ಹೂವೂ ಸಹ ! ತಿಪ್ಪೆಯ ಸಾರವುಂಡೇ ಬೆಳೆದ ಬಳ್ಳಿಯೊಡಲಿನ ಹೂವಿನಿಂದ ಹರಡುವ ಕಂಪು ಮಾತ್ರ ಅದ್ಭುತ ! ಇಂತಹಾ ಅದೆಷ್ಟು ವೈಚಿತ್ರ್ಯಗಳು ಈ ಸೃಷ್ಠಿಯೊಳಗಡಗಿವೆಯೋ ! ಬಲ್ಲವರಾರು !? ಆದರೆ ಇದಕ್ಕೆ ಸೃಷ್ಠಿಯ ಅತ್ಯಂತ ಶ್ರೇಷ್ಠಕೂಸು ಎಂದು ಬಣ್ಣಿಸಲ್ಪಡುವ ನಮ್ಮ ಬದುಕನ್ನೊಮ್ಮೆ ಇದರೊಟ್ಟಿಗೆ ಹೋಲಿಸಿಕೊಂಡು ನೋಡೋಣ. ನಮಗೆ ಸಿರಿ ಸಂಪದವಿದೆ, ನಾಗರೀಕತೆಯಿದೆ, ಸಂಸ್ಕಾರವಿದೆ ಇನ್ನೂ ಏನೇನೋ ಇದೆ. ಇದನ್ನು ಬಣ್ಣಿಸಲು ನನ್ನ ಶಬ್ದಭಂಡಾರ ಬರಿದಿದೆ. ಆದರೆ ಏನು ಮಾಡುವುದು ! ಎಲ್ಲ ಸಿರಿಗಿಂತಲೂ ಮಿಗಿಲಾದ ಭಾವಸಿರಿಯೇ ಇಲ್ಲವಾಗಿದೆ. ಸಕಲ ಜೀವರಾಶಿಗಳಲ್ಲೂ ಭಾವನಾ ಶ್ರೀಮಂತಿಕೆ ಇದೆ. ನಮ್ಮಲ್ಲಿ ಮಾತ್ರ ಭಾವದಾರಿದ್ರ್ಯವಿದೆ. ಹೃದಯದಲ್ಲಿ ಬೇಡದ ಕಸವೇ ತುಂಬಿದೆ. ಸ್ವಚ್ಛ ಮಾಡಲು ವ್ಯವಧಾನವೇ ಇಲ್ಲ. ಅರಳಬೇಕಾದ ಬದುಕು ನರಳುತ್ತಿದೆ. ಎಂತಹಾ ವಿಪರ್ಯಾಸ !? ನೂರಕ್ಕೆ ನೂರರಷ್ಟು ಒಂದು ವಿಷಯ ಸ್ಪಷ್ಟ. ಅದೇನೆಂದರೆ ನಮ್ಮ ಬದುಕಿಗಿಂತಲೂ ತಿಪ್ಪೆಯ ಬಳ್ಳಿಯ ಮತ್ತು ಅದರ ಹೂವಿನ ಬದುಕು ಅದೆಷ್ಟು ಅರ್ಥಪೂರ್ಣ ! ಅದೆಷ್ಟು ಸಾರ್ಥಕ ! ಅಲ್ಲವೇ ಗೆಳೆಯರೇ ! ಒಮ್ಮೊಮ್ಮೆ ಚಿಂತೆಗೊಳಗಾಗುತ್ತೇನೆ. ನಾನೇಕೆ ಹಾಗಿಲ್ಲವೆಂದು.
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021