ನನೆಯರಳಿ ನಗೆ ರವಿಯ
ಕಿರಣ ಸ್ಪರ್ಶವು ಸಾಕು !
ಬಲದೊಳರಳಿಸಲದರ
ಬದುಕೆಂತು ಪೇಳು !?
ಸಾಜದೊಳಗೆದೆಯರಳೆ
ಗುರುಸನ್ನಿಧಿಯೆ ಸಾಕು
ಬಲವಂತವೇ ಬೋಧೆ
ಜಾಣಮೂರ್ಖ !//
ಮೊಗ್ಗರಳಿ ಹೂವಾಗಿ ಕಂಪು ಸೂಸಲು ನೈಸರ್ಗಿಕವಾದ ರವಿಕಿರಣದ ಸ್ಪರ್ಶವಷ್ಟೇ ಸಾಕು. ಬಲವಂತವಾಗಿ ಅರಳಿಸ ಹೋದರೆ ಎಸಳುಗಳು ಹರಿದು , ಹೂವಿನ ಆತ್ಮವೇ ಆದ ಮಕರಂದವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಅದರ ಬದುಕು ನಷ್ಟವಾಗುತ್ತದೆ. ನಮ್ಮ ಹೃದಯವೂ ಸಹ ಒಂದು ಮೊಗ್ಗಿನಂತೆಯೇ ! ಅದು ಅರಳಬೇಕು. ಬಲವಂತವಾಗಿ ಅರಳಿಸಬಾರದು. ಅದಕ್ಕೆ ಸದ್ಗುರುವಿನ ಪ್ರಭೆಯಷ್ಟೆ ಸಾಕು ! ಸನ್ನಿಧಿಯಷ್ಟೇ ಸಾಕು. ಬಲವಂತದ ಬೋಧನೆಯು ಕೇವಲ ಯಾಂತ್ರಿಕ ಕಾರ್ಯವಾಗುತ್ತದೆ ಬಿಟ್ಟರೆ ಯಾವ ಪುರುಷಾರ್ಥ ಸಾಧನೆಯೂ ಆಗುವುದಿಲ್ಲ. ಗುರುವಿನ ಕೆಲಸ ಸ್ಥಿತಿಕಾರ್ಯ ! ಒಂದರ್ಥದಲ್ಲಿ ಶ್ರೀಮನ್ನಾರಾಯಣನ ಕಾರ್ಯವಿದ್ದಂತೆ. ದೀಪದಿಂದ ದೀಪ ಬೆಳಗಿದಂತೆ, ಆತ್ಮಜ್ಯೋತಿಯಿಂದ ಆತ್ಮಜ್ಯೋತಿಯನ್ನು ಬೆಳಗುವ ಗುರುತರವಾದ ಕಾರ್ಯ. ಇದು ಸ್ವಾಭಾವಿಕವಾಗಿ ಆಗಬೇಕೇ ಹೊರತು ಬಲವಂತವಾಗಿ ಅಲ್ಲ. ಬಲವಂತದಿಂದ ಹೃದಯ ಅರಳದು. ಕೆರಳುತ್ತದೆಯಷ್ಟೆ. ಇಷ್ಟು ಸೂಕ್ಷ್ಮವಾಗಿ, ಸ್ವಾಭಾವಿಕವಾಗಿ ಬೋಧನೆಯ ಪ್ರಕ್ರಿಯೆಯು ಜರುಗಬೇಕೇ ಹೊರತು ಅದು ಹೊರೆಯಾಗಬಾರದು. ಅಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021