ಕೊಡುವ ಭಾಗ್ಯವನೆಲ್ಲ
ಬಿಡದೆ ಪಡೆವುದು ವಿಧಿಯು !
ಪಡೆಯದಿಹ ಭಾಗ್ಯಮಿದೆ
ಒಡನೆ ಪಡೆ ಕೆಳೆಯ !
ಅಳಿವ ವೈಭೊಗ ತೊರೆ
ದಾತ್ಮದರಿವನು ಪಡೆದು
ಮುಕ್ತನಾಗೇಳೇಳೊ
ಜಾಣಮೂರ್ಖ //
ವಿಧಿಯು ನಮಗೆ ಯಾವ ಯಾವ ಭಾಗ್ಯವನ್ನು ನೀಡುವುದೋ ಅದನ್ನೆಲ್ಲಾ ಒಮ್ಮೆ ನಿರ್ದಾಕ್ಷಣ್ಯವಾಗಿ ಹಿಂಪಡೆಯುತ್ತದೆ. ಏನನ್ನೂ ಬಿಡುವುದಿಲ್ಲ. ಇದೊಂದು ಮಹಾ ವಿಯೋಗ. ದುಃಖಕರ ! ಎಲ್ಲವೂ ಹೋಗುತ್ತದೆ , ಯಾವುದೂ ಶಾಶ್ವತವಲ್ಲ ಎಂಬುದು ನಿಶ್ಚಿತವಾದ ಮೇಲೆ ದುಃಖವಾದರೂ ಏಕೆ ? ಅಲ್ಲವೇ ಓ ,ಗೆಳೆಯಾ ವಿಧಿಯು ಪಡೆಯದಿಹ ಭಾಗ್ಯವೊಂದಿದೆ. ಅದನ್ನು ಪಡೆದುಕೊಳ್ಳುವ ಅದ್ವಿತೀಯ ಶಕ್ತಿಯೂ ನಿನಗಿದೆ. ಅದೇ ಆತ್ಮಜ್ಞಾನ. ಇದರ ಜಾಡು ಕಷ್ಟವಾದರೂ ಆ ಜಾಡು ಹಿಡಿದರೆ ಮುಗಿಯಿತು. ಮತ್ತೆ ಹಿಂದಿರುಗುವ ಮಾತೇ ಇಲ್ಲ. ಅದೇ ಚಿರವು. ಉಳಿದುದೆಲ್ಲವೂ ನೀರಮೇಲಣ ಗುಳ್ಳೆ ! ಗಾಳಿಗೊಡ್ಡಿದ ಸೊಡರು ! ಎಲ್ಲವೂ ನಶ್ವರ. ಇಂತಹಾ ಅರಿವನ್ನು ಪಡೆದವರು ಭವಬಂಧನಗಳಿಂದ ಮುಕ್ತರಾಗುತ್ತಾರೆ. ಅಂತಹಾ ಶ್ರೇಷ್ಠವಾದ ಆತ್ಮಜ್ಞಾನದ ಜಾಡು ಹಿಡಿದು ಆತ್ಮಾನಂದ ಪಡೆಯೋಣ. ಕಾಲನ ಮನೆಯ ಬಾಗಿಲ ಬಳಿ ಉಪವಾಸ ಕುಳಿತ ಉದ್ಧಾಲಕ ಮಹಾರಾಜನ ಪುತ್ರ ನಚಿಕೇತನು ಆತ್ಮಜ್ಞಾನವನ್ನು ಪಡೆದುದನ್ನು ಒಮ್ಮೆ ಸ್ಮರಿಸಿಕೊಳ್ಳಿ !
ಏಳಿ ಗೆಳೆಯರೇ ಜಾಗೃತರಾಗೋಣ. ಅಂತಹಾ ಅರಿವೀವ ಗುರುವಿನ ಗುಲಾಮರಾಗಿ ಅರಿವ ಪಡೆಯೋಣ. ಪಡೆಯದಿದ್ದರೆ ಮುಕುತಿಯ ಮಾತೆಲ್ಲಿಯದು ! ಅಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021