ನಡೆ ದಿವ್ಯ ಮಡಿಯಾಗಿ
ನುಡಿಯ ಹೂವಾಗಿಸುತ
ಅಡಿಗಡಿಗೆ ಜಾಗೃತಿಯ
ಮಂತ್ರವನೆ ಪಠಿಸಿ
ಬದುಕನರ್ಚನೆ ಮಾಡಿ
ಹೃದಯ ಕಮಲವ ಬೆಳಗಿ
ಕತ್ತಲೆಯ ಕಳೆಯೇಳೊ
ಜಾಣಮೂರ್ಖ //
ಮೊನ್ನೆ ನಮ್ಮ ಗುರುಬಂಧುಗಳೊಬ್ಬರ ಜೊತೆಯಲ್ಲಿ ಮಾತನಾಡುವಾಗ ಸಖರಾಯಪಟ್ಟಣದ ಗುರುನಾಥ ಶ್ರೀ ಶ್ರೀ ಶ್ರೀ ವೆಂಕಟಾಚಲ ಸದ್ಗುರುಗಳ ಬಗ್ಗೆಯೇ ಮಾತನಾಡಿದೆವು. ಅದೊಂದು ಗುರುಚರಿತ್ರೆಯ ಪಾರಾಯಣದಂತೆಯೇ ಆಯಿತು ಬಿಡಿ. ಶೃಂಗೇರಿಯ ಜಗದ್ಗುರುಗಳಾದ ಶ್ರೀಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ದರ್ಶನಕ್ಕೆಂದು ತೆರಳಿದ ಗುರುನಾಥರು ಸ್ನಾನವನ್ನೇ ಮಾಡಿರಲಿಲ್ಲವಂತೆ. ಇದನ್ನು ಅಲ್ಲೊಬ್ಬರ ಕಿವಿಯಲ್ಲಿ ಪಿಸುಮಾತಿನಲ್ಲಿ ಹೇಳುವಾಗ, ಜಗದ್ಗುರುಗಳು ಸ್ವತಃ ತಾವೇ ಹತ್ತಿರಕ್ಕೆ ಬಂದು ಸ್ನಾನಗೀನವೆಲ್ಲ ನಮ್ಮಂತೋರಿಗೆ, ನಿಮಗಲ್ಲ ಬನ್ನಿ ಎಂದು ಒಳಗೆ ಕರೆದೊಯ್ದರಂತೆ ! ಈ ಘಟನೆಯನ್ನು ಅರುಹಿದ ಆ ಘಳಿಗೆ ನನ್ನ ಕಣ್ಣು ತೆರೆಸಿ , ಹೃದಯವರಳಿಸಿದ ಅಮೃತ ಘಳಿಗೆಯೇ ಸರಿ. ಇಬ್ಬರೂ ಒಂದೊಂದು ಜ್ಞಾನಮೇರುಗಳು ! ದೈವಾಂಶ ಸಂಭೂತರು. ಆಗಲೇ ಹುಟ್ಟಿದುದು ಈ ಮುಕ್ತಕ. ಅಂತಹಾ ಪುಣ್ಯಾತ್ಮರ ನಡೆಯೇ ದಿವ್ಯ ಮಡಿ ! ಮಾತು ಸುಂದರ ಹೂವು! ಹೆಜ್ಜೆ ಹೆಜ್ಜೆಗೆ ಜಾಗೃತಿಯ ಮಂತ್ರವನ್ನು ಜಗತ್ತಿಗೆ ಸಾರುತ್ತಾ , ತಮ್ಮ ಬದುಕನ್ನೇ ಒಂದು ದಿವ್ಯವಾದ ಅರ್ಚನೆಯನ್ನಾಗಿಸಿ , ಎಲ್ಲರ ಮನಸ್ಸಿನ ಕತ್ತಲೆಯನ್ನು ಕಳೆದು ಹೃದಯ ಕಮಲವು ಅರಳಿ ಕಂಗೊಳಿಸುವಂತೆ ಮಾಡುವ ಆದರ್ಶಮಯ ಬದುಕು ಅದೆಷ್ಟು ಸುಂದರ !! ಅದೆಷ್ಟು ಅರ್ಥಪೂರ್ಣ ! ಮಾನವ ಕುಲಕೋಟಿಗೆ ಒಂದು ಸುಂದರ ಬದುಕನ್ನು ಕಟ್ಟಿಕೊಡಲು ಬಂದ ಅವತಾರ ಪುರುಷರುಗಳವರು. ನಮ್ಮ ಬದುಕು ಇಂತಹಾ ದೃಷ್ಟಾಂತಗಳಿಂದ ಒಂದೇ ಬಾರಿಗೆ ಆ ಎತ್ತರಕ್ಕೆ ಏರಲಾಗದಿದ್ದರೂ ಕೇಳುತ್ತ ಕೇಳುತ್ತ ಅನುಭವಿಸಿ ಅಂತಾದರೆ ಎನಿತು ಚಂದವಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021