ಒಂದು ಕೆಲಸ ಮಾಡಿದ ಮೇಲೆ ಅದನ್ನ ಇನ್ನೊಬ್ಬರು ಬಂದು ಮಾಡುವ ಹಾಗಿರಬಾರದು, ಬೆರಳು ತೋರಿಸುವ ಹಾಗೂ ಇರಬಾರದು ಮಗುವೆ, ಮಾಡಿದ ಮೇಲೆ ಅದನ್ನು ಸರಿಯಾಗಿ ಮಾಡ್ಬೇಕು ಹೇಳಿಸ್ಕೋಬಾರದು ಅನ್ನೋಳು ಅಜ್ಜಿ ಯಾವಾಗಲು. ನನಗೋ ಗಡಿಬಿಡಿಯಲ್ಲಿ ಮಾಡಿ ಮುಗಿಸಿದೆ ಅಂತ ಅನ್ನೋ ಹಾಗೆ ಮಾಡಿ ಆಡಲೋ, ಶಾಲೆಗೋ ಅಥವಾ ಆಚೆಮನೆಗೋ ಓಡುವ ಕಾತುರ.
ಮಾಡೋದೇ ಅಂದ ಮೇಲೆ ಸರಿಯಾಗಿ ಮಾಡೋಕೆ ಏನು? ಇಲ್ಲ ಅಂದ ಮೇಲೆ ಮಾಡ್ಲೇಬಾರದು, ನಾಳೆ ನಿನ್ನ ಅನ್ನೋಲ್ಲ ಕಣೆ ನನ್ನ ಅಂತಾರೆ “ಅಜ್ಜಿ ಸಾಕಿದ ಮಕ್ಕಳು ಬೊಜ್ಜಕ್ಕೂ ಬಾರಾ” ಅಂತ . ಎಂದು ಅವಳ ಸಹಸ್ರನಾಮ ಮುಂದುವರಿಯುತ್ತಲೇ ಹೋಗುತಿತ್ತು. ಕೇಳಿಸಿಕೊಳ್ಳ ಬೇಕಾಗಿದ್ದ ನಾನು ಮಾರು ದೂರ ಹೋಗಿ ಆಗಿರುತಿತ್ತು ಅವಳ ಮಾತುಗಳನ್ನು ನಾನೇ ಹೇಳಿಕೊಳ್ಳುತ್ತಾ ಮುಸಿ ಮುಸಿ ನಗುತ್ತಾ.. ಇದು ದಿನನಿತ್ಯದ ರಗಳೆ ಎಂದುಕೊಳ್ಳುತ್ತಾ..
ಸಣ್ಣದೋ ದೊಡ್ಡದೋ ಏನೇ ಮಾಡಬೇಕಾದರೂ ಅದರಲ್ಲಿ ಪೂರ್ಣ ಮನಸ್ಸು ಇದ್ದಾಗ ಮಾತ್ರ ಅದು ಸರಿಯಾಗಿ ಆಗೋದು, ಮಾಡಲೇ ಬೇಕಾದಾಗ ರಗಳೆ ಮಾಡಿಕೊಳ್ಳುವುದಕ್ಕಿಂತ ಒಪ್ಪಿಕೊಂಡು ಅದನ್ನು ಮುಗಿಸುವುದು ಹೆಚ್ಚು ನೆಮ್ಮದಿ. ಮಾಡಿದ ಕೆಲಸವೂ ಅಚ್ಚುಕಟ್ಟು. ಮಾಡಿದ ಮೇಲೆ ಒಮ್ಮೆ ತಿರುಗಿ ನೋಡಿದಾಗ ಅನಾಯಾಸವಾಗಿ ಗೊತ್ತಿಲ್ಲದೇ ಅರಳುವ ತೃಪ್ತಿಯ ಒಂದು ಪುಟ್ಟ ನಗೆಯಿದೆಯಲ್ಲ ಅದರ ಬೆಲೆ ಅಮೂಲ್ಯ. ಅದು ಅನುಭವಕ್ಕೆ ಮಾತ್ರ ದಕ್ಕೋದು ಎಂದು ಅರ್ಥವಾಗಲು ಬಹಳಷ್ಟು ಮಳೆಗಾಲ ಕಳೆದಿತ್ತು. ನೆನದ ಮನಸ್ಸು ಹದವಾಗಿತ್ತು.
ಕೆಲವಷ್ಟು ಯಾಂತ್ರಿಕವಾಗಿ ತನ್ನ ಪಾಡಿಗೆ ತಾನು ನಡೆದುಹೊಗುತ್ತಿರುತ್ತದೆ. ಹಾಗೆ ಮಾಡಿರುವುದು, ನಡೆದು ಹೋಗುವುದು ನಮ್ಮ ಗಮನಕ್ಕೂ ಬಂದಿರುವುದಿಲ್ಲ. ನಿಂತಾಗ ಮಾತ್ರ ಗೊತ್ತಾಗುತ್ತದೆ, ಅದೆಷ್ಟು ಮುಖ್ಯ ಅನ್ನೋದು ಅರಿವಾಗುತ್ತದೆ. ಹಾಗೆ ತನ್ನ ಪಾಡಿಗೆ ತಾನು ನಡೆಯುವ ಉಸಿರಾಟವನ್ನು ಒಮ್ಮೆ ಗಮನಿಸಿ, ಉಸಿರು ಎಳೆದುಕೊಳ್ಳುವುದು ಹಾಗೂ ಬಿಡುವುದು ಗಮನಿಸುತ್ತಾ ಮಾಡಿದರೆ ನಿಧಾನಕ್ಕೆ ಮನಸ್ಸು ಶಾಂತವಾಗುವುದು ಅರಿವಿಗೆ ಬರುತ್ತದೆ. ಶಾಂತವಾದ ಮನಸ್ಸು ಹೇಗೆ ಪ್ರತಿಕ್ರಿಯಿಸುತ್ತದೆ ಅನ್ನುವುದು ನಮ್ಮ ಅನುಭವಕ್ಕೂ ಬರುತ್ತೆ ಎನ್ನುತ್ತಿದ್ದರು ಸದ್ಗುರು. ಇದು ಕೇವಲ ಉಸಿರಿನ ಬಗ್ಗೆ ಮಾತ್ರವಾ ಎಂದು ಯೋಚಿಸಿದರೆ ನಾವೆಷ್ಟು careless ಆಗಿ ಬದುಕುತ್ತಿದ್ದೇವೆ ಎನ್ನಿಸಿ ಇದು ನಮ್ಮದೇ ಬದುಕಾ ಎನ್ನುವ ಗೊಂದಲ ಹುಟ್ಟುತ್ತದೆ. ಹಾಗೆ ಗಮನಿಸುತ್ತಾ ಹೋದಾಗ ಎಷ್ಟು ಅನಾವಶ್ಯಕ ಕೆಲಸ ಮಾಡುತ್ತೇವೆ, ಎಷ್ಟು ಎನರ್ಜಿ ವೇಸ್ಟ್ ಮಾಡ್ತೀವಿ ಅನ್ನೋದು ಅರ್ಥವಾಗುತ್ತೆ. ಗಮನಿಸುವುದರಲ್ಲಿ, ಮಾಡುವುದನ್ನು ಪೂರ್ಣ ಮನಸ್ಸಿನಿಂದ ಮಾಡುವುದರಲ್ಲಿ ಎಷ್ಟೊಂದು ಅರ್ಥ, ಎಷ್ಟೊಂದು ಅನುಭಾವ..
ಹೀಗೆ ಯೋಚಿಸುತ್ತಾ ಕುಳಿತಾಗ ಪಕ್ಕನೆ ಈ ಮಾತು ಎಲ್ಲೋ ಕೇಳಿದ ಹಾಗೆಯಲ್ಲ ಅನ್ನೋದು ನೆನಪಾಯಿತು. ನೆನಪಾಗುತ್ತಿದ್ದ ಹಾಗೆ ಕಿವಿಯಲ್ಲಿ ಬೈಗುಳ ಮೊಳಗಿದ ಹಾಗಾಯಿತು. ಒಂದು ಕೆಲಸ ಮಾಡಿದ ಮೇಲೆ ಇನ್ನೊಬ್ಬರು ಬಂದು ಅದನ್ನು ಮಾಡುವ ಹಾಗಿರಬಾರದು ಎನ್ನುವ ಮಾತಿನಲ್ಲಿ ಇಷ್ಟೊಂದು ಅರ್ಥವಿತ್ತಾ ಅನ್ನಿಸಿ ಒಮ್ಮೆ ಮೈ ಝಂ ಅಂದಿತು. ಛೆ ಅನಾವಶ್ಯಕವಾಗಿ ಅವಳನ್ನು ಬೈದು ಕೊಂಡೆನಾ ಸಣ್ಣ ಪಾಪಪ್ರಜ್ಞೆ.
ಯಾವುದೋ ಒಂದು ಚಿಕ್ಕ ಕೆಲಸ ಹೇಳಿದಾಗ ಒಟ್ರಾಶಿ ಮಾಡಿ ಮುಗಿಸಿ ಓಡುವ ಧಾವಂತದಲ್ಲಿ ಮಗಳು ಇರುವಾಗ ಅಚಾನಕ್ ಆಗಿ ಪುಟ್ಟಿ ಎಷ್ಟು ಸಲ ಹೇಳೋದು ಮಾಡಿದ್ರೆ ಸರಿಯಾಗಿ ಮಾಡಬೇಕು ಮತ್ತೆ ನಾನು ಬಂದು ಅದನ್ನು ಮಾಡುವ ಹಾಗೆ ಮಾಡಬಾರದು ಎಂದು ಕೊಂಚ ಜೋರಾಗಿಯೇ ಹೇಳುವಾಗ ಓಡುತ್ತಿದ್ದ ಮಗಳು ಒಮ್ಮೆ ತಿರುಗಿದಳು. ಕಣ್ಣಲ್ಲಿ ಸಣ್ಣ ನಗು. ಕಾಲ ಮರುಕಳಿಸಿತಾ ಅಂತ ಒಮ್ಮೆ ಜಿಗುಟಿಕೊಂಡೇ. ಅವಳು ನನ್ನೊಳಗೆ ಇದ್ದಾಳ ಇಷ್ಟು ದಿನ ಸುಮ್ಮನೆ ಹುಡುಕುತ್ತಿದ್ದೆನಾ ಅನ್ನಿಸಿ ಕುಳಿತರೆ
ಬದುಕು ಸರಳ…. ನಾವೇ ಅದನ್ನು ಕ್ಲಿಷ್ಟ ಮಾಡ್ಕೊತಿವಿ ಅಷ್ಟೇ ಕಣೆ ಎಂದು ಅಜ್ಜಿ ಪಿಸುಗುಟ್ಟಿದ ಹಾಗಾಯಿತು.
- ಬದುಕು ಸರಳ…. ನಾವೇ ಅದನ್ನು ಕ್ಲಿಷ್ಟ ಮಾಡ್ಕೊತಿವಿ ಅಷ್ಟೇ - August 10, 2020
- ಮಾತೃತ್ವಕ್ಕೆ ಜೀವ ಭೇಧವಿಲ್ಲಾ …. - July 30, 2020
- ಉಳಿಸಿಕೊಳ್ಳುವುದು ಎಷ್ಟು ಕಷ್ಟ…. - July 21, 2020