ಸರಳವಾಗಿರೆ ಜಗದಿ
ಮರುಳನೆನುವರು ಮಂದಿ
ಬಿಗುವಾಗಲೇಗುವುದು
ಬಲುಕಷ್ಟಮೆಂಬರ್
ಅವರ ಮೆಚ್ಚಿಪೆನೆಂಬ
ಗೊಡವೆಯೇತಕೆ ದೂಡು
ನಿನ್ನ ನೀ ಮೆಚ್ಚಿ ಸಾರ್
ಜಾಣಮೂರ್ಖ //
ನಾವು ನಮ್ಮ ಬದುಕಿನ ಬಹಳಷ್ಟು ಕಾಲ ಬೇರೆಯವರಿಗಾಗಿಯೇ ಬದುಕುತ್ತೇವೆ. ಅವರು ಮೆಚ್ಚಲಿ ಇವರು ಮೆಚ್ಚಲಿ ಅಂತ. ಈ ನಿಟ್ಟಿನಲ್ಲಿ ಯೋಚಿಸಿ ಗೆಳೆಯರೇ , ನೀವು ತುಂಬಾ ಸರಳವಾಗಿದ್ದರೆ ನಿಮ್ಮನ್ನು ಮರುಳ ಎನ್ನುತ್ತಾರೆ. ಹೇಗಿರಬಹುದಿತ್ತು ! ಅವನಿಗೆ ಪ್ರಾಪಂಚಿಕ ಜ್ಞಾನವೇ ಇಲ್ಲ , ಬದುಕೋ ದಾರೀನೇ ಗೊತ್ತಿಲ್ಲ ಎಂದು ಜರಿಯುತ್ತಾರೆ. ಒಂದುವೇಳೆ ನೀವು ಸ್ವಲ್ಪ ಬಿಗುವಾದಿರಿ ಎಂದಿಟ್ಟುಕೊಳ್ಳಿ. ಅವನು ಬಹಳ ಅಹಂಕಾರಿ ಕಣಯ್ಯ. ಅವನ ಹತ್ತಿರ ಬಹಳ ಕಷ್ಟ. ಇವನೇನು ಭಾರಿ ಎನ್ನುವಂತಾಡುತ್ತಾನೆ ಎನ್ನುತ್ತಾರೆ. ಜನ ಹೇಗಿದ್ದರೂ ದೂರುತ್ತಾರೆ. ಸರಳ ಸಾತ್ವಿಕ ಸ್ವಭಾವವನ್ನು ಅರ್ಥಮಾಡಿಕೊಳ್ಳದ ಇಂತಹವರನ್ನು ಮೆಚ್ಚಿಸುವ ಗೊಡವೆಯಾದರೂ ಏಕೆ ? ನಿನ್ನ ಬದುಕು ನಿನಗೆ ಮೆಚ್ಚುಗೆಯಾದರೆ ಸಾಕು. ಹೊಗಳುವವರು ಹೊಗಳಲಿ, ತೆಗಳುವವರು ತೆಗಳಲಿ ನಿನ್ನಂತೆ ನೀ ಬದುಕು. ನೀನು ನಿನಗೆ ಹೃತ್ಪೂರ್ವಕವಾಗಿ ಮೆಚ್ಚುಗೆಯಾದರೆ ಸಾಕಯ್ಯ ಗೆಳೆಯ. ಅನ್ಯರ ಗೊಡವೆಯಾದರೂ ಏಕೆ !? ಅಲ್ಲವೇ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021