ಸುಖವನರಸುವರೆಲ್ಲ
ರೆಂತಿಹುದುಮೀ ಸುಖವು ?
ಮೂಲಮಾವುದುಮಿದಕೆ
ದುಃಖದಾ ಪಯಣ !
ಅಳೆಯಲಳವೇ ಸುಖವ ?
ಅರ್ಥೈಸುವೇನಿದನು ?
ಎಲ್ಲೆಯಾವುದುಮಿದಕೆ ?
ಜಾಣಮೂರ್ಖ //
ಇಂದು ಸುಖ ಯಾರಿಗೆ ಬೇಡ ? ಎಲ್ಲರೂ ಇದರ ಅನ್ವೇಷಣೆಯಲ್ಲೇ ಇದ್ದಾರೆ. ಹಾಗಾದರೆ ಹೇಗಿರುತ್ತದೆ ಈ ಸುಖವೆಂದರೆ ? ಇದನ್ನು ಅಳೆಯಲು ಸಾಧ್ಯವೇನು ? ಏನಾದರೂ ಮಾನದಂಡವಿದೆಯೇನು ? ಬದುಕಿನಲ್ಲಿ ಸಹಜವಾಗಿ ಆಸೆ ಪಡುತ್ತೇವೆ. ಆದರೆ ಇದು ದುಃಖಕ್ಕೆ ಮೂಲಕಾರಣವಾಗುತ್ತದೆ. ಹಾಗಿದ್ದರೆ ಎಲ್ಲಿದೆ ಸುಖ ! ಆಸೆ ಪಡುವುದರಿಂದ ಸುಖ ಸಿಗುವುದಿಲ್ಲ ಎಂದಾಯಿತು ತಾನೆ !? ಆಸೆಯನ್ನು ಬಿಟ್ಟು ಬಿಡೋಣವೇ ?! ಅದೆಂತಾದೀತು !? ಆಸೆಯನ್ನು ಬಿಟ್ಟರೆ ಬದುಕಿಗೆ ಸ್ವಾರಸ್ಯವೆಲ್ಲಿದೆ !? ಹಾಗಾದರೆ ಎಂತಹಾ ಪರಿಕಲ್ಪನೆಗಳಿವು ? ಬದುಕು ಸುಖದ ಅನ್ವೇಷಣೆಯಲ್ಲಿ ದುಃಖಮಯವಾಗುತ್ತಿದೆಯಲ್ಲಾ !! ಈ ಸುಖವನ್ನು ಅಳೆಯಲಾದೀತೆ ? ಹಾಗಾದರೆ ಮಾನದಂಡವದೇನು ?
ಹೋಗಲಿ ಸರಳವಾದ ವ್ಯಾಖ್ಯಾನದೊಂದಿಗೆ ಅರ್ಥೈಸಲು ಸಾಧ್ಯವೇ ? ಕೊನೆ ಯಾವುದು ಇದಕ್ಕೆ ? ಗೆಳೆಯರೇ ಸ್ವರ್ಗಸುಖವೆನ್ನುವರಲ್ಲಾ ಅದು ಕೇವಲ ಮಾತಿಗಷ್ಟೆ ! ಅದರ ನಂತರ ಮನಸ್ಸು ಅದಕ್ಕಿಂತ ಮಿಗಿಲಾದುದಕ್ಕೆ ಹಪಹಪಿಸುತ್ತದೆ. ಮತ್ತೆಲ್ಲಿಯ ಸುಖ ! ಆದರೆ ಭಗವಂತ ಕೊಟ್ಟುದರಲ್ಲಿ ತೃಪ್ತಿಯಿಂದ ವರ್ತಮಾನದಲ್ಲಿ ಬದುಕುವುದಿದೆಯಲ್ಲಾ ! ಅದೇ ಸುಖವಾದ ಬದುಕು. ಬಯಸಿ ಬಯಸಿ ಬೇಯುವುದಕ್ಕಿಂತ ಬಂದುದನ್ನು ಪ್ರಸಾದವೆಂಬಂತೆ ಸ್ವೀಕರಿಸಿ ಬದುಕುವುದೇ ಸುಖದ ಅರ್ಥಪೂರ್ಣ ವ್ಯಾಖ್ಯಾನವಾಗಬಹುದೇನೋ! ಏನಂತೀರಿ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021