ಹಗಲ ಕಾಂತಿಗೆ ತಾರೆ
ಕಾಣದಿರಲೇನಂತೆ ?
ಶಾಂತ ನೀರವ ತುಂಬಿ
ದಿರುಳೊಳಗೆ ನೋಡು !
ಲೌಕಿಕ ಪ್ರಖರತೆಗೆ
ಕಾಣದಿರೆ ದೇವ ತಾ
ನಿಲ್ಲವೆನುವುದು ತರವೆ
ಜಾಣಮೂರ್ಖ //
ಬೆಳಗಿನ ರವಿಯ ಪ್ರಖರತೆಯಲ್ಲಿ ನಕ್ಷತ್ರಗಳು ಕಾಣುವುದಿಲ್ಲ ! ಹಾಗೆಂದ ಮಾತ್ರಕ್ಕೆ ತಾರೆಗಳೇ ಇಲ್ಲವೆನ್ನಲಾದೀತೆ ? ಇದು ಸಹಜ ! ಆದರೇನಂತೆ ?! ನೀರವತೆ , ಶಾಂತತೆಯು ತುಂಬಿ ತುಳುಕುವ ಇರುಳಿಹುದಲ್ಲ ! ಆಗ ಆಕಾಶವನ್ನೊಮ್ಮೆ ದಿಟ್ಟಿಸು ಗೆಳೆಯಾ. ಪ್ರಶಾಂತವಾಗಿ ಹೊಳೆವ ನಕ್ಷತ್ರಗಳ ಜೊತೆಗೆ ಸೃಷ್ಠಿಯ ಅಗಾಧತೆಯೂ ಗೋಚರಿಸುತ್ತದೆ. ಹಾಗೆಯೇ ಈ ಲೌಕಿಕತೆಯ ಪ್ರಖರತೆಯಲ್ಲಿ ಭಗವಂತನು ಕಾಣುತ್ತಿಲ್ಲವೆಂದ ಮಾತ್ರಕ್ಕೆ ಅವನೇ ಇಲ್ಲ ಎನ್ನುವುದು ತರವೇ ? ನ್ಯಾಯಸಮ್ಮತವೇನು ? ಭೌತಿಕ ಸೌಂದರ್ಯ ವೀಕ್ಷಣೆಗೆ ಬೌತಿಕವಾದ ಇರುಳು , ಶಾಂತತೆ ಅಗತ್ಯವಾದರೆ , ಅಭೌತಿಕವಾದ ಆ ದಿವ್ಯಶಕ್ತಿಯನ್ನು ಕಾಣಲು ಮನಸ್ಸಿನ ಪ್ರಶಾಂತತೆ ಮತ್ತು ಅಭೌತಿಕವಾದ ಒಳಗಣ್ಣ ತೆರೆದು ನೋಡುವುದು ಅತಿ ಅಗತ್ಯವಾಗಿದೆ. ಆಗಲೇ ಭಗವಂತನು ಗೋಚರಿಸುವುದು. ಸೃಷ್ಠಿಯು ತೆರೆದಿಟ್ಟಿರುವ ಈ ಸತ್ಯವನ್ನು ಒಳಗಣ್ಣಿನಿಂದ ನೋಡಬೇಕು. ಅಲ್ಲವೇ ಗೆಳೆಯರೇ ?!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021