ಹೊರನಗೆಯ ನಕ್ಕೊಡೇಂ
ಒಳನಗೆಯನರಿಯದೊಡೆ ?
ತನುವು ಹಣ್ಣಾದೊಡೇಂ
ಮನವು ಹಣ್ಣಾಗದೊಡೆ ?
ಗುರಿಯನರಿಯದೆ ಬರಿದೆ
ನೋವಿಗೇನ್ ನರಜನ್ಮ !?
ಕಾರಣವನರಿ ಮೊದಲು
ಜಾಣಮೂರ್ಖ //
ಭೌತಿಕವಾದವುಗಳನ್ನು ಕೇವಲ ಚರ್ಮಚಕ್ಷುವಿನಿಂದು ನೋಡಿ ಮೇಲ್ನೋಟಕ್ಕೆ ನಗುವುದರಲ್ಲಿ ನಾವು ನಿಸ್ಸೀಮರು. ಆದರೆ ಇಷ್ಟೇ ಅಲ್ಲ ! ಒಳನಗೆಯೆಂಬುದಿದೆ. ಆದು ಆತ್ಮಚಕ್ಷುವಿನಿಂದ ಜಗತ್ತಿನ ಸೂಕ್ಷ್ಮಗಳನ್ನು ಕಂಡು ಆತ್ಮಪೂರ್ವಕವಾಗಿ ನಗುವ ಒಂದು ಅಪೂರ್ವ ಸ್ಥಿತಿ. ಈ ನಗೆಯನ್ನು ನಗುವುದು ಅಷ್ಟು ಸುಲಭ ಸಾಧ್ಯವಲ್ಲ ! ಬದುಕನ್ನು ಒಳಗಣ್ಣಿನಿಂದ ನೋಡುವ ಕಲೆ ಸಿದ್ಧಿಸಿದವರಿಗೆ ಇದು ಸಾಧ್ಯವೇ ಹೊರತು ಹಾಗೆ ನಟಿಸುವವರಿಗಲ್ಲ ! ಬರೀ ಶರೀರ ಹಣ್ಣಾದರೇನು ? ಮನಸ್ಸು ಹಣ್ಣಾಗಿ ಕಳಿತು ಪಕ್ವವಾಗದಿದ್ದರೆ ಏನು ಪ್ರಯೋಜನ !? ಈ ಸೃಷ್ಟಿಯ ಕಾರಣವನ್ನರಿಯದೆ “ಏನೂ ಇಲ್ಲ ಈ ಜೀವನದಲ್ಲಿ, ಎಲ್ಲ ಖಾಲಿ ಖಾಲಿ ಯಾಕೋ ತುಂಬಾ ಬೇಜಾರು ” ಅಂತ ಗೊಣಗುವವರಿದ್ದಾರೆ. ಸೃಷ್ಟಿಯ ಕಾರಣವನ್ನು, ಗುರಿಯನ್ನು ಅರಿಯದೇ ಅವರಿಗೆ ಬೇಜಾರಾಗುತ್ತಿರುತ್ತದೆ ಅಷ್ಟೆ ಗೆಳೆಯರೆ. ಇಲ್ಲಿ ಎಲ್ಲಕ್ಕೂ ಒಂದು ಕಾರಣವಿದೆ. ಆ ಕಾರಣವನ್ನು ಅರಿಯುವವರು ನಾವಾಗಬೇಕು.ಅಷ್ಟಲ್ಲದೇ ಬರೀ ನೋವು ಪಡುವುದಕ್ಕಾಗಿಯೇನು ಈ ನರಜನ್ಮ !? ಮೊದಲು ಈ ಬದುಕಿನ ಪರಮಗುರಿಯನ್ನು ಅರಿತು ಸಾರ್ಥಕವಾಗಿ ಬದುಕಬೇಕು. ಗಿಡ, ಮರ, ಪ್ರಾಣಿ ಪಕ್ಷಿ ಸಂಕುಲವೇ ಸಾರ್ಥಕ ಬದುಕನ್ನು ಬದುಕುತ್ತಿರುವಾಗ ಬುದ್ಧಿಜೀವಿಯೆಂದು ಸ್ವಯಂಘೋಷಿತರಾದ ನಾವು ಬುದ್ಧಿರಾಹಿತ್ಯರಾಗಿ, ಸ್ವಾರ್ಥಪರರಾಗಿ , ವ್ಯರ್ಥವಾಗಿ ಬದುಕು ಸಾಗಿಸುವುದು ವಿಪರ್ಯಾಸವಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021