ಮಡಿಯೊಳಾಧ್ಯತೆಯಾರ್ಗೆ !
ತನುವಿಗೋ ಮನಸಿಗೋ !
ಸ್ನಾನ ತನುವಿಗೊ ಮನಕೊ
ಧ್ಯಾನದಿಂ ಪೇಳು !
ಮಾತೊಳಿಹ ಮಡಿತನವು
ಮನಕೆ ಬಾರದು ಏಕೆ ?
ಮಡಿ ತಂದೆ ತಾಯ್ಗಳಿಗೆ
ಜಾಣಮೂರ್ಖ //
ಮಡಿಯಲ್ಲಿ ಎರಡು ರೀತಿ. ಒಂದು ಹೊರಗಿನ ಮಡಿ. ಇನ್ನೊಂದು ಒಳಗಿನ ಆಂತರ್ಯದ ಮಡಿ. ತನುವಿನ ಮಡಿ , ಮನಸಿನ ಮಡಿ ಎಂದು ಸರಳವಾಗಿ ಹೇಳಬಹುದು. ಇವೆರಡರಲ್ಲಿ ಯಾವುದಕ್ಕೆ ಆಧ್ಯತೆ ನೀಡಬೇಕು ? ಸ್ನೇಹಿತರೇ ಎರಡೂ ಅವಶ್ಯಕವೆ. ಆದರೆ ಆಧ್ಯತೆ ರೀತ್ಯಾನುಸಾರ ಮನದ ಮಡಿಯೇ ಶ್ರೇಷ್ಠ. ಭಗವಂತ ಮೆಚ್ಚುವುದು ಇದನ್ನೇ. ಸ್ನಾನವೆಂಬುದು ಮೊದಲು ಮನಸ್ಸಿಗೆ ! ಹೌದು ತಾನೆ. ಹಾಗೆಂದು ಶರೀರದ ಸ್ನಾನವನ್ನು ಕಡೆಗಣಿಸಲಾಗದು. ಆದರೆ ಆಧ್ಯತೆ ಮನಸ್ಸಿನ ಸ್ನಾನಕ್ಕೇ ಇರಬೇಕು. ಕೆಲವರು ಮಾತಿನಲ್ಲಿ ಬಹು ಮಡಿವಂತರು. ಆದೇನು ನಯ ! ವಿನಯ ! ಸಂಸ್ಕಾರವಂತ ರೀತಿ ನೀತಿಗಳು ! ಆದರೆ ಅವರ ಆಚಾರ ವಿಚಾರಗಳನ್ನು ನೋಡಿದರೆ ಬರೀ ಸೊನ್ನೆ , ಬರೀ ಡಂಭ! ಮಾತಿನಲ್ಲಿರುವ ಮಡಿವಂತಿಕೆ ಕೃತಿಯಲ್ಲಿ ಇಲ್ಲದೇ ಇರುವುದೇ ಅವರ ಬದುಕಿನ ಪರಮ ವೈರುದ್ಧ್ಯ ! ಮೊದಲು ನಾವು ಮನಸ್ಸಿನ ಮಲಿನತೆಯನ್ನು ಕಳೆಯೋಣ ಗೆಳೆಯರೇ. ಮನೋವಿಕಾರಗಳನ್ನು ತ್ಯಜಿಸಿ , ಶಾಂತರಾಗಿ ಯೋಚಿಸಿ ಬದುಕನ್ನು ಸಂತಸದ ಭಾವದಿಂದ ಕಳೆಯೋಣ. ಮಡಿಯನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸಬಹುದು. ಮಡಿಯುವುದು ಎಂದರೆ ಸಾಯುವುದು, ಜೀವ ಸವೆಸುವುದು ಎಂಬರ್ಥವೂ ಇದೆ. ನಮಗೆ ಜನ್ಮ ನೀಡಿದ , ಹೊತ್ತು ಹೆತ್ತು ಸಾಕಿ ಸಲಹಿದ ತಂದೆ ತಾಯ್ಗಳಿಗಾಗಿ ಮಡಿಯೋಣ. ಅದು ಅತ್ಯಂತ ಶ್ರೇಷ್ಠವಾದ ಮಡಿ. ಏನಂತೀರಿ ?!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021