ಸುಳಿಗಾಳಿ ತಿಳಿನೀರು
ಮೃದು ಮಾತು ಮನೆಯಲ್ಲಿ
ತಿನ್ನಲಿಷ್ಟನ್ನವಿರೆ
ಬಡಭಾವವೇಕೆ ?
ಕೂಡಿಡುವ ಪರಿಯೇಕೆ ?
ಸುಡುವ ತಾಪವದೇಕೆ ?
ಸಡಗರದಿ ಬದುಕೇಳೊ
ಜಾಣಮೂರ್ಖ //
ಬೆಲೆಕಟ್ಟಲಾಗದ ಶುದ್ಧಗಾಳಿ , ಶುದ್ಧನೀರು , ಉದರ ಪೋಷಣೆಗೆ ತಿನ್ನಲು ಒಂದಿಷ್ಟು ಅನ್ನ , ಮನೆಯಲ್ಲಿ ಮಧುರವಾದ ಪ್ರೀತಿಯ ಮಾತುಗಳಿದ್ದಾಗ ಸ್ವರ್ಗವಾದರೂ ಏಕೆ ? ಇಷ್ಟರ ಮೇಲೆ ಮತ್ತೆ ಅತಿಯಾಗಿ ಕೂಡಿಡುವ ಬಗೆಯೇಕೆ ? ಮಾನಸಿಕವಾಗಿ ಏನೋ ಒಂದು ಬಗೆಯ ಅಪೂರ್ಣತೆಯ ಸುಡುತಾಪವೇಕೆ ? ಸ್ವಲ್ಪ ಸೂಕ್ಷ್ಮವಾಗಿ ನೋಡಿ ! ನಾವು ನಮ್ಮದೇ ಆದ ಅಪೂರ್ಣತೆಯ ನರಕದಲ್ಲೇ ಇದ್ದೇವೆ. ಅದರ ತಾಪದಲ್ಲಿ ನಿತ್ಯ ಬೇಯುತ್ತಿದ್ದೇವೆ. ಈ ಬೇಯುವುದರ ಪರಿಣಾಮಗಳು ಘೋರ ಕಣಯ್ಯ ಗೆಳೆಯ. ಗಾಳಿ, ನೀರು, ಅನ್ನ ಹಾಗೂ ಮಾತು ಈ ಮೂಲಭೂತವಾದವುಗಳ ಜೊತೆಗೆ ಅಗತ್ಯವೆನಿಸುವ ಕಿಂಚಿತ್ ಆಸೆಯಿರುವುದು ಸ್ವಾಭಾವಿಕ. ಆದರೆ ಎಲ್ಲವೂ ನನಗೇ ಬೇಕೆಂದು ಕೂಡಿಟ್ಟು ಸಂಗ್ರಹಿಸೋದರಿಂದ ನಾಳೆ ನಮ್ಮ ಮಕ್ಕಳು ಸೋಮಾರಿಗಳಾಗುತ್ತಾರೆ. ಅವರ ಬದುಕನ್ನು ನಾವು ಕಿತ್ತುಕೊಂಡಂತಾಗುತ್ತದೆ. ಈ ಭಾವವೇಕೆ !? ನಾವೂ ಬದುಕಿ ಇತರರನ್ನೂ ಬದುಕಲು ಬಿಡೋಣ. ಅವರಿಗೂ ಅವರದ್ದೇ ಆದ ಬದುಕಿದೆ. ಮುಂದಿನ ಪೀಳಿಗೆಗೆ ಒಂದಿಷ್ಟು ಜೀವನಮೌಲ್ಯಗಳನ್ನೂ , ಸಂಸ್ಕಾರವನ್ನು ನೀಡಿ ಸಂತೋಷ ಮತ್ತು ಸಡಗರದಿಂದ ಬದುಕೋಣ. ಏನಂತೀರಿ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021