ಅಲ್ಲೊಂದು ಇಲ್ಲೊಂದು, ಕಾಡಿನ ನಡುವೆ, ಗದ್ದೆಯ ಮಧ್ಯೆ ತೋಟದ ಅಂಚಿನಲ್ಲಿ ಇರುವ ಹಳ್ಳಿಯ ಮನೆಗೊಂದು ನಾಯಿಯ ಅವಶ್ಯಕತೆ ತುಂಬಾ ಇರುತ್ತದೆ. ಬೇರೆಲ್ಲ ಕಾರಣಕ್ಕಿಂತ ಕೆಲಸದ ನಡುವೆ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಇರುವಾಗ ಮನೆಗೆ ಯಾರಾದರೂ ಬಂದರೆ ಅದನ್ನು ಹೇಳುವುದಕ್ಕಾದರೂ ಒಂದು ಜೀವ ಬೇಕು ಅನ್ನೋದಕ್ಕಾದರೂ. ಎಲ್ಲರೂ ಕೆಲಸಕ್ಕೆ ಹೋಗಿರುವಾಗ ಮನೆಯಲ್ಲಿ ಒಬ್ಬರೇ ಇರುವವರಿಗೆ ಒಂಟಿತನ, ಖಾಲಿತನ ಕಾಡದಿರಲು. ಧೈರ್ಯ ತುಂಬಲು. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಒಂದು ನಾಯಿ ಇದ್ದೆ ಇರುತ್ತದೆ. ಫ್ರೆಂಡ್ ಮನೆಯಲ್ಲಿ ಜರ್ಮನ್ ಶೆಫರ್ಡ್ ಮರಿ ಹಾಕಿದೆಯಂತೆ ಒಂದು ತಗೊಂಡ್ ಬರ್ತೀನಿ ಅಂದಾಗ ಅರೆಮನಸ್ಸಿನಿಂದಲೇ ಹೂ ಗುಟ್ಟಿದ್ದೆ. ಇಲ್ಲಿಂದ ಊರಿನವರೆಗೆ ಅದನ್ನು ತೆಗೆದುಕೊಂಡು ಹೋಗುವ ಕೆಲಸವೇ ದೊಡ್ಡದಾಗಿ ಕಾಣಿಸಿತ್ತು.
ಅದಿನ್ನೂ ತಿಂಗಳ ಮರಿ. ಆಗತಾನೆ ಅಮ್ಮನ ಮಡಿಲನ್ನು ಬಿಟ್ಟು ಬಂದಿತ್ತು. ಮೊತ್ತ ಮೊದಲ ಬಾರಿಗೆ ಹೊಸ ಜಾಗ, ಹೊಸ ಜನ, ಎಲ್ಲಕ್ಕಿಂತ ಜಾಸ್ತಿ ಅಮ್ಮನಿಲ್ಲದ ಖಾಲಿತನ. ಸುತ್ತ ನೋಡುತ್ತಾ, ಮುದುರಿಕೊಳ್ಳುತ್ತಾ, ಕಣ್ಣ ತುಂಬಾ ಅಂಜಿಕೆ ತುಂಬಿಕೊಂಡ ಅದನ್ನು ನೋಡಿದಾಗ ಸಂಕಟವಾಗಿತ್ತು. ಗೊತ್ತಿಲ್ಲದ ಯಾವುದೋ ಜಾಗಕ್ಕೆ ನೂರಾರು ಕಿ.ಮಿ ಪ್ರಯಾಣ ಮಾಡಬೇಕಿದ್ದ ಅದಕ್ಕೊಂದು ಪುಟ್ಟ ಬುಟ್ಟಿಯನ್ನು ತಂದಿದ್ದೆ. ಪಾಪಚ್ಚಿ ಅಲ್ವಾ ಅಮ್ಮ ಅಂತ ಅದಕ್ಕೊಂದು ತನ್ನದೇ ಮೃದುವಾದ ಬ್ಲಾಂಕೆಟ್ ಒಂದನ್ನು ಎತ್ತಿ ಹಾಸಿ ರೆಡಿ ಮಾಡಿದ್ಲು ಅಹಿ. ಪಿಳಿ ಪಿಳಿ ಕಣ್ಣು ಬಿಡುತಿದ್ದ ಅದು ಅಮ್ಮನನ್ನು ಬಿಟ್ಟು ಬಂದಿದ್ದಕ್ಕೆ, ಹೊಸ ಜಾಗವಾಗಿದ್ದಕ್ಕೆ ಕಂಗಾಲಾಗಿತ್ತು. ಪುಟ್ಟ ಬಟ್ಟಲಿನಲ್ಲಿ ಹಾಲು ತಂದಿಟ್ಟರೆ ಅದನ್ನೂ ಮೂಸಿಯೂ ನೋಡದೆ ಮಂಕಾಗಿ ತಂದವನ ಬಳಿಯೇ ಮುದುರಿ ಕುಳಿತಿತ್ತು. ಸದ್ಯಕ್ಕೆ ಅವನೊಬ್ಬನೇ ಪರಿಚಿತ ಈ ಜಗದಲ್ಲಿ ಅನ್ನೋ ಭಾವ ಇತ್ತಾ…
ನಾವೂ ಹಾಗೆಯೇ ಅಲ್ಲವಾ ಅನ್ನಿಸಿ ಬಿಟ್ಟಿತ್ತು ಆ ಕ್ಷಣ. ಒಂದು ಪರಿಚಿತ ಹೆಗಲು ಆ ಕ್ಷಣದಲ್ಲಿ ದೇವರ ಹಾಗೆ ಅನ್ನಿಸಿಬಿಡುತ್ತದೆ. ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ ಅನ್ನಿಸುವ ಹಾಗೆ. ಸಂಕಟದ ಸಮಯದಲ್ಲಿ ಒಂದು ಚಿಕ್ಕದೂ ಎಷ್ಟೊಂದು ಭರವಸೆ ತುಂಬುತ್ತದೆ, ಬದುಕುವ ಧೈರ್ಯ, ನಡೆಯುವ ಭರವಸೆ ಕೊಡುತ್ತದೆ, ಅದೇ ಪಾರಾದ ಮೇಲೆ ಅದೆಷ್ಟು ಕ್ಷುಲ್ಲಕ ಎಂದು ಭಾವಿಸುತ್ತೇವೆ ಅನ್ನೋದನ್ನೇ ಯೋಚಿಸುತಿದ್ದೆ.
ಅಹಿ ಇನ್ನೂ ಪುಟ್ಟ ಕೂಸು ಆಗ. ಅವಳಿಗೆ ತಿನ್ನಿಸಲೆಂದು ಮೆದುವಾಗಿ ಮಾಡಿದ ಅನ್ನಕ್ಕೆ ಹಾಲು ಹಾಕಿ ತಂದು ಇಟ್ಟರೂ ತಿನ್ನದೇ ಮುಷ್ಕರ ಹೂಡಿತ್ತು. ವಿಷಾದವನ್ನೇ ಹೊದ್ದು ಕುಳಿತಿತ್ತು. ಅದನ್ನು ಎತ್ತಿಕೊಂಡು ಮಡಿಲಲ್ಲಿ ಕುಳ್ಳಿರಿಸಿ ಅಹಿಗೆ ತಿನ್ನಿಸುವಂತೆ ಪುಟ್ಟ ತುತ್ತು ಮಾಡಿ ಅಂಗೈಯಲ್ಲಿ ಹಿಡಿದು ಅದರ ತಲೆಯನ್ನು ನೇವರಿಸಿ ತಿನ್ನೋ ಕಂದ ಅಂದ ಕೂಡಲೇ ಒಮ್ಮೆ ತಲೆಯೆತ್ತಿ ನನ್ನ ಮುಖವನ್ನೇ ಕ್ಷಣಕಾಲ ದಿಟ್ಟಿಸಿ ಆಮೇಲೆ ನಿಧಾನವಾಗಿ ತಿಂದು ಮುಗಿಸಿತು. ಪ್ರಾಮಾಣಿಕ ಭಾವನೆ ಎಷ್ಟು ಬೇಗ ಎದುರಿನವರ ಮನಸ್ಸು ತಟ್ಟುತ್ತೆ. ಅದು ಕೋಪ, ಪ್ರೀತಿ, ದ್ವೇಷ ಯಾವುದೇ ಆಗಿರಬಹುದು. ಅದರ ಹೊಟ್ಟೆ ತುಂಬುವಷ್ಟು ತುತ್ತನ್ನ ಅಂಗೈಯಲ್ಲೇ ಹಿಡಿದು ಮುದ್ದು ಮಾಡಿ ತಿನ್ನಿಸಿದಾಗ ಅದೇನೋ ತೃಪ್ತಿ. ಆಮೇಲೆ ಹೊರಡುವವರೆಗೂ ಅದು ನಮ್ಮಿಬ್ಬರ ಹಿಂದೆಯೇ ಓಡಾಡುತ್ತಿತ್ತು. ಅದನ್ನೆತ್ತಿ ಬುಟ್ಟಿಯಲ್ಲಿ ಮಲಗಿಸುವಾಗ ದೂರ ಕಳಿಸುತ್ತಾಳೆ ಅನ್ನೋದು ಅರ್ಥವಾಯಿತೋ ಎಂಬಂತೆ ಮಂಕಾಗಿ ಮಲಗಿಬಿಟ್ಟಿತ್ತು. ಅವತ್ತು ರಾತ್ರಿಯೆಲ್ಲಾ ಸಂಕಟ, ಮಗುವನ್ನೇ ದೂರ ಕಳಿಸಿದ ಭಾವ. ಕರುಳ ತುಂಡೊಂದು ಬೇರಾದ ಭಾವ. ಮಾತೃತ್ವಕ್ಕೆ ಜೀವ ಭೇಧವೂ ಇರುವುದಿಲ್ಲ ಎಂದು ಮೊದಲಬಾರಿಗೆ ಅರ್ಥಮಾಡಿಸಿತ್ತು ಆ ಜೀವ.
ಆಮೇಲೆ ತುಂಬಾ ಬೇಗ ಊರಿಗೆ ಹೊಂದಿಕೊಂಡು ಬಿಟ್ಟಳು. ಪರಿಸ್ಥಿತಿ ಎಲ್ಲವನ್ನೂ ಒಗ್ಗಿಕೊಳ್ಳುವ ಹಾಗೆ ಮಾಡುತ್ತದೆ. ಬದುಕ ಬೇಕಾದರೆ ಹೊಂದಿಕೊಳ್ಳುವ ಮನಸ್ಸು ತುಂಬಾ ಮುಖ್ಯ. ಕಾಲ ಯಾರಿಗೂ ನಿಲ್ಲುವುದಿಲ್ಲ ಮಾತ್ರವಲ್ಲ ಬಗ್ಗುವುದೂ ಇಲ್ಲ. ಬಗ್ಗಿಸುವ ಕಲೆ ಕಾಲನ ಹೊರತು ಇನ್ಯಾರಿಗೆ ಗೊತ್ತು. ಹೊಸ ಜಾಗಕ್ಕೆ ಹೊಸ ಜನಗಳಿಗೆ ಹೊಂದಿಕೊಂಡು ಮನೆಯವಳೇ ಆಗಿ ಹೋದಳು ಅವಳು. ಯಾರೇ ಬರಲೂ ಹೆದರುವ ವಾತಾವರಣ ನಿರ್ಮಾಣ ಮಾಡಿಬಿಟ್ಟಳು. ಅವಳ ಹದ್ದುಗಣ್ಣು ತಪ್ಪಿಸಿ ಮನುಷ್ಯರಿರಲಿ ಒಂದು ದನವೂ ಗೇಟ್ ಒಳಗೆ ಕಾಲಿಡಲು ಸಾದ್ಯವಿರಲಿಲ್ಲ. ಒಮ್ಮೆ ದ್ವನಿ ಎತ್ತಿದಳು ಅಂದರೆ ಆ ತಣ್ಣನೆಯ ವಾತಾವರಣದಲ್ಲಿ ಕಿಲೋಮೀಟರ್ ಗಳಷ್ಟು ದೂರದವರೆಗೂ ಕೇಳಿಸುತಿತ್ತು. ಅಪರಿಚಿತರು ಇರಲಿ ಪರಿಚಿತರೂ ಬೆಚ್ಚಿ ಬೀಳುವ ಹಾಗಾಗುತಿತ್ತು.
ಮಲೆನಾಡು ಇದ್ದದ್ದೇ ಹಾಗೆ ಬಿಡಿ. ಮನೆ ದೂರ ದೂರ ಇದ್ದರೂ ಭಾವ ಹತ್ತಿರದಲ್ಲೇ ಇರುತಿತ್ತು. ಅಲ್ಲೆಲ್ಲೋ ಬೊಗಳುವ ನಾಯಿಯ ಸದ್ದು, ದನಗಳ ಕೊರಳಿನ ಗಂಟೆಯ ಝೇಂಕಾರ, ಕೋಳಿಯ ಕೂಗು, ಹಿತ್ತಲಿನಲ್ಲಿ ಬೈಯುವ ದನಿ ಎಲ್ಲವೂ ಕೇಳಿಸುತ್ತದೆ, ಮತ್ತದು ಯಾರ ಮನೆಯ ಯಾವ ಪ್ರಾಣಿ ಅನ್ನುವ ಗುರುತೂ ಮನಸ್ಸಿಗೆ ಹತ್ತುತ್ತದೆ. ಗಾಡಿಯ ಸದ್ದಿನಿಂದಲೇ ಯಾರು ಹೋದರೂ ಅನ್ನೋದು ಗುರುತಿಸುವ ಕಲೆ ಅವರಿಗೆ ಕರಗತವಾಗಿರುತ್ತದೆ. ಹಾಗಾಗಿ ದೂರದಲ್ಲಿದ್ದರೂ ಹತ್ತಿರವಾಗಿ ಬದುಕುತ್ತಿದ್ದರು ಅವರು.
ಮೋವಿ ಇಲಿ ಹಿಡಿಯುವ ಬೆಕ್ಕಿಗೆ ಯಾವತ್ತೂ ತೊಂದರೆ ಕೊಟ್ಟಿರಲಿಲ್ಲ. ಒಳ ಬರುವ ಕೇರೆ ಹಾವಿಗೂ… ಅದರಿಂದ ಸಣ್ಣ ಅಪಾಯದ ಮುನ್ಸೂಚನೆ ದೊರೆತರೆ ಸುಮ್ಮನಿರುತ್ತಿರಲಿಲ್ಲ. ಬೇರೆ ಸಮಯದಲ್ಲಿ ದನ ಕರುಗಳ ಜೊತೆ ಆಡುವ ಅವಳು ಮೇಯಲು ಬಿಡುವಾಗ ಮತ್ತೆ ಮನೆಗೆ ಬರುವಾಗ ದಾರಿ ತಪ್ಪಿಸಿದರೆ ಅಟ್ಟಿಸಿಕೊಂಡು ಕೊಂಡು ಹೋಗಿ ಸರಿ ದಾರಿ ಹಿಡಿಯುವ ಹಾಗೆ ಮಾಡುತ್ತಿದ್ದಳು. ಯಾಕೋ ಅದನ್ನು ನೋಡಿದಾಗಲೆಲ್ಲ ಬದುಕಿನ ವ್ಯಾಪ್ತಿಯನ್ನು ನೋಡಿಕೊಳ್ಳಬೇಕು ಅನ್ನಿಸುತಿತ್ತು. ಪ್ರೀತಿಗಾಗಿ ದ್ವೇಷವನ್ನು ಬಿಡುವುದು ಅಷ್ಟು ಸುಲಭದ್ದೇನಲ್ಲ.
ಪ್ರತಿ ಬಾರಿ ಊರಿಗೆ ಹೋಗುವಾಗಲು ಅವಳ ಪಾಲಿನ ಲಗೇಜ್ ಕಾರ್ ನ ಬಹುಭಾಗ ಅಕ್ರಮಿಸುತಿತ್ತು. ಪುಟ್ಟ ಮಗುವನ್ನು ನೋಡಲು ಹೋಗುವಾಗ ಅದಕ್ಕೆ ಏನು ಬೇಕೋ ಎಂದು ಲಿಸ್ಟ್ ಮಾಡಿ ತೆಗೆದುಕೊಂಡು ಹೋಗುವ ಹಾಗೆ ಅವಳಿಗೂ ತೆಗೆದುಕೊಂಡು ಹೋಗುತ್ತಿದ್ದೆವು. ಒಂದು ಮರೆತರೂ ಏನೋ ಪ್ರಳಯವಾದ ಹಾಗೆ ಅನ್ನಿಸುತ್ತಿತ್ತು. ಇಳಿಸಂಜೆಯಲ್ಲಿ ಹೊರಟು ಮಧ್ಯರಾತ್ರಿಯ ವೇಳೆಗೆ ಊರು ತಲುಪಿದರೂ ಒಂದು ಸಣ್ಣ ಎಲೆ ಬಿದ್ದರೂ ಊರಿಗೆಲ್ಲಾ ಕೇಳಿಸುವ ಹಾಗೆ ಬೊಗಳುತಿದ್ದ ಅವಳು ತುಟಿಕ್ಪಿಟಿಕ್ ಎನ್ನದೆ ಜಿಗಿಯುತ್ತಾ ಕಾರಿನ ಬಾಗಿಲ ಬಳಿಗೆ ಓಡಿ ಬರುತಿದ್ದಳು. ಆ ಕತ್ತಲೆಯಲ್ಲೂ ಅವಳಿಗೆ ತನ್ನದೇ ಕಾರ್ ಅನ್ನೋದು ಅದ್ಹೇಗೆ ಅರ್ಥವಾಗುತಿತ್ತೋ. ಇಳಿಯುತಿದ್ದಂತೆ ಒಮ್ಮೆ ಮೈ ಮೇಲೆ ಹಾರಿ ನೆಕ್ಕಿ ಅವಳಿಗೆ ಸಮಾಧಾನ ಆಗುವವರೆಗೂ ಮುಂದಡಿಯಿಡಲು ಬಿಡದಂತೆ ಅಡ್ಡಗಟ್ಟುತ್ತಿದ್ದಳು. ಅಹಿಯದೇ ಇನ್ನೊಂದು ರೂಪವಾ ಅನ್ನಿಸುತ್ತಿದ್ದದ್ದು ಅದೆಷ್ಟು ಸಲವೋ..
ಅಲ್ಲಿ ಇರುವಷ್ಟು ದಿನವೂ ಅವಳ ತಿಂಡಿ, ಊಟ, ಹಾಲು ಎಲ್ಲವುದರ ಹೊಣೆ ಅಹಿಯದು. ಬೆಳಿಗ್ಗೆ ಏಳುತ್ತಿದ್ದ ಹಾಗೆ ಅವಳನ್ನು ನೋಡಿ ಮಾತಾಡಿಸಲೇ ಬೇಕು. ದಿನದ ಸಮಯದಲ್ಲಿ ಆಗಾಗ ಹೋಗಿ ಮಾತಾಡಿಸುವುದು ಕಡ್ಡಾಯ. ಸಂಜೆಯ ವೇಳೆಗೆ ನಮ್ಮ ಜೊತೆ ಅವಳೂ ಆಡಲು ಬರುತಿದ್ದಳು. ಆಡುತ್ತಾ ಆಡುತ್ತಾ ಅಷ್ಟು ದೂರಕ್ಕೆ ಹೋಗಿ ಅಲ್ಲಿಂದ ಒಂದೇ ಉಸಿರಿನಲ್ಲಿ ಶಕ್ತಿಯಿದ್ದಷ್ಟೂ ವೇಗವಾಗಿ ಓಡಿಬಂದು ಮೈಮೇಲೆ ಜಿಗಿದು ಎರಡು ಕಾಲಲ್ಲಿ ನಿಲ್ಲುವುದು ಅವಳ ಪ್ರಿಯವಾದ ಆಟ. ಅವಳು ಹಾಗೆ ಓಡಲು ಶುರು ಮಾಡುತಿದ್ದಂತೆ ಅಷ್ಟರವರೆಗೂ ಅಂಗಳದಲ್ಲಿ ಆಡುತಿದ್ದ ಅಹಿ ಕಿರುಚಿಕೊಂಡು ಒಳಕ್ಕೆ ಓಡುತಿದ್ದಳು. ಅವಳ ಭಾರವನ್ನು ಬ್ಯಾಲೆನ್ಸ್ ಮಾಡಲು ಆಗದೆ ನಾನು ಜೋಲಿ ಹೊಡೆಯುತಿದ್ದರೆ ಅವಳಿಗದೇನೋ ಸಂಭ್ರಮ.
ಸಂಜೆಯಾಗುತಿದ್ದಂತೆ ಮನೆಮಂದಿಯೆಲ್ಲಾ ಒಟ್ಟಾಗಿ ಸದ್ದೇ ಇಲ್ಲದಂತೆ ಟಿ.ವಿ ಯ ಮುಂದೆ ಪ್ರತಿಷ್ಟಾಪನೆಯಾಗುತಿದ್ದರೆ ಅವಳು ಬಾಗಿಲ ಎದುರು ನನ್ನ ಬರುವನ್ನೇ ಕಾಯುತಿದ್ದಳು. ಒಂದು ಪುಸ್ತಕವನ್ನು ಹಿಡಿದು ಅಂಗಳದಲ್ಲಿ ಒಂದು ಕುರ್ಚಿಯನ್ನು ಹಾಕಿಕೊಂಡು ನಾನು ಓದುತ್ತಲೋ, ಇಲ್ಲಾ ಆಕಾಶ ದಿಟ್ಟಿಸುತ್ತಲೋ ಕುಳಿತರೆ ಅವಳು ನನ್ನ ಕಾಲ ಬುಡದಲ್ಲಿ ಕುಳಿತೋ, ಇಲ್ಲ ಮೈಮೇಲಿ ಹತ್ತಿಯೋ ತರಲೆ ಮಾಡುತ್ತಿದ್ದಳು. ನಾನು ಎದ್ದು ಹೊರಟರಂತೂ ಅವಳಿಗೆ ಖುಷಿಯೋ ಖುಷಿ. ದೊಡ್ಡ ಅಜ್ಜಿಯಂತೆ ಅವಳು ಮುಂದಕ್ಕೆ ಗಂಭಿರವಾಗಿ ಹೋದರೆ ನಾನು ಅವಳನ್ನು ಹಿಂಬಾಲಿಸಬೇಕಿತ್ತು. ಅಪ್ಪಿ ತಪ್ಪಿಯೂ ನಾನು ಮುಂದೆ ಹೋಗುವಂತಿರಲಿಲ್ಲ. ಅದು ನಮ್ಮಿಬ್ಬರ ಏಕಾಂತ ಸಮಯ. ಮತ್ತವಳು ನನ್ನ ಗುರು, ರಕ್ಷಕಿ ಎರಡೂ..
ಮರಗಳ ಮರೆಯಲಿ ಇಣುಕುವ ಚಂದ್ರನ ಬೆಳಕಲ್ಲಿ, ಜೀರುಂಡೆಗಳ ಝೇಂಕಾರಕ್ಕೆ ಕಿವಿಯಾಗುತ್ತಾ, ಸುರಿಯುವ ಇಬ್ಬನಿಗೆ, ಸುಳಿಯುವ ಚಳಿಗಾಳಿಗೆ ನಡುಗುತ್ತಾ, ಅಲ್ಲೊಂದು ಇಲ್ಲೊಂದು ಮಿನುಗುವ ನಕ್ಷತ್ರಗಳ ಎಣಿಸುತ್ತಾ, ಭೂಮಿ, ಆಕಾಶಗಳ ಭೇಧವಿಲ್ಲದೆ ಆವರಿಸಿದ ರಾತ್ರಿಯಲ್ಲಿ ನಾವಿಬ್ಬರೂ ನಡೆಯುತ್ತಿದ್ದರೆ ಶಬ್ಧದಲ್ಲೊಂದು ನಿಶಬ್ದತೆ ಒಳಕ್ಕಿಳಿಯುತ್ತಿತ್ತು. ಆ ನೀರವ ರಾತ್ರಿಯಲ್ಲಿ ಎದೆಗಿಳಿಯುವ ಏಕಾಂತದಲ್ಲಿ ಜೊತೆಗೂಡುವ ನೂರಾರು ಭಾವಗಳಲ್ಲಿ ಜೊತೆ ಜೊತೆಗೆ ಸಾಗುತ್ತಾ ಮೌನವಾಗಿಯೇ ಚೂರೂ ವಿರಾಮವಿಲ್ಲದಂತೆ ಅದೆಷ್ಟು ಮಾತಾಡುತ್ತಿದ್ದೆವು ನಾವಿಬ್ಬರು. ವಾಪಾಸ್ ಬಂದು ಮತ್ತದೇ ಅಂಗಳದಲ್ಲಿ ಕುಳಿತರೆ ಅವಳು ಮಡಿಲಲ್ಲಿ ಮುಖವಿಟ್ಟು ಕುಳಿತುಬಿಡುತ್ತಿದ್ದಳು. ಅಲ್ಲೊಂದು ದಿವ್ಯ ಏಕಾಂತ ಸೃಷ್ಟಿಯಾಗುತ್ತಿತ್ತು. ಕಾಲ ಪರಿವೆಯಿಲ್ಲದೆ ಉರುಳಿ ಹೋಗುತಿತ್ತು. ಸಾಂಗತ್ಯ ಮತ್ತಷ್ಟು ಬಿಗಿಯಾಗುತಿತ್ತು. ಕಳೆದೇಹೋಗಿರುತ್ತಿದ್ದೆವು ಅಮ್ಮಾ ಬಾರೆ ಊಟ ಹಾಕೇ ಅನ್ನೋ ಅಹಿಯ ಧ್ವನಿ ಎಚ್ಚರಿಸುವವರೆಗೆ..
ಅಂತಹ ಸಂಗಾತಿ ಮೋವಿ ಕಳೆದ ಬಾರಿ ವಾಪಾಸ್ ಇಲ್ಲಿಗೆ ಬರುವ ಎರಡು ದಿನಗಳ ಮುನ್ನ ವಿಪರೀತ ಮೌನವಾಗಿ ಹೋಗಿದ್ದಳು. ಕ್ಷಣ ಹೊತ್ತು ಅವಳಿಂದ ದೂರ ಇರಬಾರದು ಅನ್ನೋ ಹಾಗೆ ವರ್ತಿಸುತ್ತಿದ್ದಳು. ಬಿಟ್ಟು ಹೋದರೆ ಕೋಪಗೊಳ್ಳುತ್ತಿದ್ದಳು. ಅದೇನೋ ಅಸಹನೆ. ಆಟ, ಹಾರಾಟವನ್ನೆಲ್ಲ ಕಟ್ಟಿಟ್ಟು ಸುಮ್ಮನೆ ಕಾಲಬುಡದಲ್ಲಿ ಜಗತ್ತೇ ತಲೆಯ ಮೇಲೆ ಬಿದ್ದಂತೆ ಕೂರುತಿದ್ದಳು. ಅದೇನೋ ಒದ್ದಾಟ… ವಿಚಿತ್ರ ಮೌನ. ಅಲ್ಲಿಯವರೆಗೂ ಖುಷಿ ಕೊಡುತ್ತಿದ್ದ ಮೌನ ಭಯ ಹುಟ್ಟಿಸುವ ಹಾಗಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಕಣ್ಣಿಂದ ಸುರಿಯುವ ನೀರು. ಯಾಕೆ ಹೀಗಾಡ್ತಿ ಅರಾಮಿಲ್ವೇನೆ ಅಂದರೂ ಮೌನವೇ ಉತ್ತರ. ಎದುರಿಗೆ ತಿನ್ನುವ ನಾಟಕ ಮಾಡುತ್ತಿದ್ದಳು. ತಿಂದಳು ಅನ್ನುವ ನೆಮ್ಮದಿಯನ್ನು ನಮಗೆ ಕೊಡುತಿದ್ದಳು.
ಅಹಿಗೆ ಆರಾಮಿಲ್ಲ ಅಂತ ತಕ್ಷಣ ಅಲ್ಲಿಂದ ಹೊರಟರೆ ಹೆಜ್ಜೆ ಮುಂದಿಡಲು ಬಿಡದೆ ಕಾಡಿಸಿದ್ದಳು. ಮೊತ್ತ ಮೊದಲ ಬಾರಿಗೆ ಅವಳಿಗೆ ಬೈದು ಕಾರು ಹತ್ತಿ ಬಂದ ಎರಡೇ ದಿನಕ್ಕೆ ಫೋನ್ ಬಂತು ಮೋವಿ ನಿದ್ದೆ ಹೋದಳು ಮತ್ತೆಂದು ಏಳಲಾರದಂತೆ ಅಂತ.. ಒಂದು ಕ್ಷಣ ಬದುಕೇ ಶೂನ್ಯ ಅನ್ನಿಸಿ ಸುಮ್ಮನೆ ಕುಳಿತು ಬಿಟ್ಟಿದ್ದೆ. ಅದೆಷ್ಟು ಪಾಡು ಪಡ್ತಾವೆ ಅವು ನೋಯಬಾರದು ಎಂದು. ಅದೇನು ನಾಟಕ ಮಾಡ್ತಾವೆ ನಮ್ಮ ನೆಮ್ಮದಿ ಕೆಡಬಾರದು ಎಂದು ಆಲೋಚಿಸಿದಾಗಲೆಲ್ಲ ಒಂದೇ ಸಮನೆ ಮಳೆ ಹನಿಯುತ್ತಿತ್ತು.
ಬಂದವಳನ್ನು ಮಡಿಲಲ್ಲಿ ಎತ್ತಿಕೊಂಡು ಎರಡು ತುತ್ತು ತಿನ್ನಿಸಿದ್ದಿದ್ದಕ್ಕೆ ಅದೆಷ್ಟು ಹಚ್ಚಿಕೊಂಡಳು, ಪ್ರೀತಿ ಕೊಟ್ಟಳು ಅನ್ನೋದು ನೆನಪಾದಗೆಲ್ಲ ಕರುಳಿನ ತುಂಡೊಂದನ್ನ ಕಳೆದುಕೊಂಡ ಸಂಕಟವಾಗುತ್ತೆ. ಇವತ್ತಿಗೂ ಊರಿಗೆ ಹೋದಾಗ ಗೇಟ್ ತೆರೆಯುವ ಮುನ್ನ ಅರಿವಿಲ್ಲದಂತೆ ಕಣ್ಣು ಅವಳ ಜಿಗಿತಕ್ಕಾಗಿ ಅರಸುತ್ತದೆ. ಅವಳನ್ನು ಕಟ್ಟಿ ಹಾಕುತಿದ್ದ ಜಾಗ ಖಾಲಿ ಖಾಲಿಯಾಗಿ ಮನಸ್ಸನ್ನ ಆವರಿಸುತ್ತೆ, ಅಣಕಿಸುತ್ತೆ. ರಾತ್ರಿ ವಾಕಿಂಗ್ ಹೋಗುವುದು ಅವಳ ಜೊತೆಗೆ ಹೊರಟು ಹೋಗಿದೆ. ರಾತ್ರಿಯ ವೇಳೆ ಹೊರಗೆ ಬಂದು ಕುಳಿತರೆ ಒಂಟಿತನ ಕಾಡುತ್ತದೆ. ಖಾಲಿತನವೊಂದು ಬದುಕಿನ ಜೊತೆ ಜೊತೆಗೆ ಹೆಜ್ಜೆ ಹಾಕುತ್ತದೆ. ಬದುಕಿನ ಅಂಗಳದ ಮೂಲೆಯ ಆ ಶೂನ್ಯತೆ ಅವ್ಯಕ್ತ ಮೌನವನ್ನು ಹುಟ್ಟು ಹಾಕುತ್ತದೆ. ಕಣ್ಣು ಆಗಸದ ಅಂಚಿನಲ್ಲಿ ಇರುವ ನಕ್ಷತ್ರಗಳ ಮಧ್ಯೆ ಅವಳನ್ನು ಅರಸಿ ಸೋಲುತ್ತವೆ.
ಪ್ರೀತಿಯ ಬಗ್ಗೆ ವ್ಯಾಖ್ಯಾನ ಕೊಡುವ ಮನುಷ್ಯ ಇವುಗಳ ಹಾಗೆ ಪ್ರೀತಿಸುವುದನ್ನ ಮಾತ್ರ ಕಲಿಯಲೇ ಇಲ್ಲಾ…
ಪ್ರೀತಿಸುವ ಅವುಗಳಿಗೆ ವ್ಯಾಖ್ಯಾನವೇ ಗೊತ್ತಿಲ್ಲ.
- ಬದುಕು ಸರಳ…. ನಾವೇ ಅದನ್ನು ಕ್ಲಿಷ್ಟ ಮಾಡ್ಕೊತಿವಿ ಅಷ್ಟೇ - August 10, 2020
- ಮಾತೃತ್ವಕ್ಕೆ ಜೀವ ಭೇಧವಿಲ್ಲಾ …. - July 30, 2020
- ಉಳಿಸಿಕೊಳ್ಳುವುದು ಎಷ್ಟು ಕಷ್ಟ…. - July 21, 2020