ಗಳಿಸೊಳಿತ ಬೆಳೆಸೊಳಿತ
ನುಳಿಸೊಳಿತ ತಿಳಿಸೊಳಿತ
ಗಳಿಸಿಬೆಳೆಸುಳಿಸೊಳಿತ
ತಿಳಿಸಿ ಬಾಳ್ ಕೆಳೆಯ !
ನಿನಗಿಹುದರೊಳಗಿನಿಸ
ನಿತ್ತ ಬಾಳದು ಧನ್ಯ
ಕಳಸಮಿದು ಬಾಳ್ಗೆ ಕೇಳ್
ಜಾಣಮೂರ್ಖ //
ಒಳ್ಳೆಯ ನ್ಯಾಯಸಮ್ಮತವಾದ ಗಳಿಕೆ ನಮ್ಮದಾಗಿರಬೇಕು. ಒಳಿತನ್ನೇ ಬೆಳೆಸಿ ಹಬ್ಬಿಸಬೇಕು. ನಮ್ಮ ಉಳಿತಾಯವೂ ಸಹ ಒಳ್ಳೆಯ ರೀತಿಯಲ್ಲೇ ಇರಬೇಕು. ಉಳಿತಾಯ ಹೇಗೇಗೋ ಗಳಿಸಿದುದಾಗಿರಬಾರದು. ಮತ್ತೆ ಇತರರಿಗೆ ಏನಾದರೂ ಹೇಳ ಹೊರಟರೆ , ಮಾತನಾಡುವುದಾದರೆ ಅದೂ ಒಳಿತೇ ಆಗಿರಬೇಕು. ಸತ್ಯವೇ ಆಗಿರಬೇಕು. ನಮಗಾಗಿ ಭಗವಂತ ಕೊಟ್ಟುದರಲ್ಲಿ ಇಷ್ಟಾದರೂ ಲೋಗರಿಗೆ ಸಲ್ಲಿಸಿ ಬದುಕಬೇಕು. ಅಂತಹಾ ಬಾಳು ಧನ್ಯ. ಹತ್ತು ಸಾವಿರ ಅನ್ಯಾಯ ಮಾರ್ಗದಲ್ಲಿ ಗಳಿಸಿ ನೂರು ರೂಪಾಯಿಯನ್ನು ದಾನಗೈದು ದಾನಫಲವನ್ನು ಬಯಸುವುದು ಎಂತಹಾ ಹಾಸ್ಯಾಸ್ಪದವಲ್ಲವೇ ? ಇಂದು ಬಿಡಿ ಪ್ರಪಂಚದ ತುಂಬಾ ಇಂತಹಾ ಜಾಣರೇ ತುಂಬಿದ್ದಾರೆ. ಗಮನಿಸಿದ್ದೀರಾ ಕಾಡುಮೃಗಗಳು ಕೂಡ ತಮ್ಮದೇ ಆದ ಮೌಲ್ಯಗಳಿಗನುಗುಣವಾಗೇ ಬದುಕುತ್ತಿರುವುದನ್ನು ಇಂದು ನೋಡುತ್ತಿದ್ದೇವೆ. ಆದರೆ ಬುದ್ಧಿಜೀವಿಯಾದ ಮಾನವರು ನಾವು ! ನಮ್ಮ ಪಾಡೇಕೆ ಹೀಗೆ ? ಉತ್ತಮ ಮೌಲ್ಯಗಳು ಬಾಳಿನಲ್ಲಿ ಮಿಳಿತವಾಗಬೇಕು. ಇವು ಬಾಳ್ಗೆ ಮುಕುಟಪ್ರಾಯದಂತೆ. ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021