ಮುಕ್ತಕವನೋದಲೇ
ನ್ಮುಕ್ತನಾದೆಯ ನೀನು ?
ಭಕ್ತಿಯಿಂ ಬದುಕಿನೊಡೆ
ನಾದು ನೋಡಯ್ಯ !
ಶಕ್ತನಾದೊಡೆ ನಿನ್ನ
ತಿದ್ದಿ ನಡೆ ಬಾಳಿಗಿದು
ಸೂಕ್ತ ಸೂಳ್ನುಡಿ ಕಾಣೊ
ಜಾಣಮೂರ್ಖ //
ಕೇವಲ ಮುಕ್ತಕಗಳನ್ನು ಓದಿ, ಒರೆದರೆ ಸಾಲದು. ಅದರಿಂದ ಬದುಕಿನ ಬಂಧನಗಳಿಂದ ನಾವೆಷ್ಟು ಮುಕ್ತರಾಗಿದ್ದೇವೆ ! ಮುಕ್ತರಾಗುತ್ತಿದ್ದೇವೆ ಎಂಬುದೇ ಮುಖ್ಯ. ಭಕ್ತಿಯಿಂದ ಇಲ್ಲಿ ಅಡಕವಾಗಿರುವ ಮೌಲ್ಯಗಳನ್ನು ನಮ್ಮ ಬದುಕಿನೊಂದಿಗೆ ಹೋಲಿಕೆ ಮಾಡಿಕೊಂಡು , ನಾದು ನೋಡಬೇಕು. ಮುಕ್ತಕವನ್ನೋದಿ , ಅಳವಡಿಸಿಕೊಂಡು, ಅದರಂತೆ ಮೌಲ್ಯಗಳ ಕಣಜವಾಗಿ ನಡೆದೆವಾದರೆ, ಅಲ್ಲಿಗೆ ಗುರುವಿತ್ತ ಅರಿವಿನ ಬೆಳಕಿನಿಂದ ಮೂಡಿದ ಈ ಮುಕ್ತಕಗಳ ರಚನಾ ಕಾರ್ಯ ಸಾರ್ಥಕ. ಈ ಮಾಯಾ ಪ್ರಪಂಚದಲ್ಲಿ ಇವುಗಳನ್ನು ಅಳವಡಿಸಿಕೊಂಡು ಏಗುವುದು ಒಂದು ಸವಾಲೇ ಸರಿ. ಏಗಲೇಬೇಕಲ್ಲ ! ಈ ನಿಟ್ಟಿನಲ್ಲಿ ಒಂದೊಂದು ಮುಕ್ತಕವೂ ಬದುಕಿನ ಒಂದೊಂದು ಸಂದರ್ಭಕ್ಕೆ ಸೂಕ್ತವಾದ ಸೂಳ್ನುಡಿ. ಸಹೃದಯತೆಯಿಂದ ಅರಿತು ಅಳವಡಿಸಿಕೊಂಡು ನಡೆದಾಗ ಬಾಳೇ ಬಂಗಾರವಾಗುತ್ತದೆ. ನಾನು ಬರೆದ ಮುಕ್ತಕವಿದು ಎಂಬ ಅಹಂಕಾರದ ಬಾವ ಇಲ್ಲಿಲ್ಲ ಗೆಳೆಯರೇ ! ಗುರುವಿತ್ತ ಅರಿವನ್ನು ಹಂಚಿ ಬಾಳುವ ಭಾವವಿದೆ, ತುಡಿತವಿದೆ. ಗುರುವಿತ್ತ ಅರಿವನ್ನು ಸಹೃದಯರ ಮಡಿಲಿಗೆ ನೀಡುತ್ತಿರುವ ತೃಪ್ತಿಯಿದೆ. ಸ್ವೀಕರಿಸಿ ಓದುತ್ತಿರುವ ತಮ್ಮ ಬಗ್ಗೆ ಕೃತಜ್ಞತೆಯಿದೆ.
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021