ಋಜುಮಾರ್ಗದಲಿ ಹರಿ
ಶ್ಚಂದ್ರ ಮುಕುತಿಯ ಪಡೆದ
ಪರಿಕಿಸಿದ ಕೌಶಿಕನು
ಚರಿತಾರ್ಥನಾದ !
ಗೈವುದೇನಿರಲಿ ಬಿಡು
ಒಮ್ಮನ ವ್ರತಿಯಾಗು
ಬಿಡುಗೊಂದಲವ ಮರುಳೆ
ಜಾಣಮೂರ್ಖ //
ಹರಿಶ್ಚಂದ್ರ ಮತ್ತು ವಿಶ್ವಾಮಿತ್ರರು ಯಾರಿಗೆ ಗೊತ್ತಿಲ್ಲ ! ಒಬ್ಬ ಪರೀಕ್ಷೆಗೆ ಒಳಗಾದವನು , ಮತ್ತೊಬ್ಬ ಪರೀಕ್ಷಿಸಿದವನು. ಇಬ್ಬರೂ ಚರಿತಾರ್ಥರಾದರು. ಹರಿಶ್ಚಂದ್ರನಂತಹಾ ಸತ್ಯವ್ರತಿಯನ್ನು ಅಷ್ಟಕಷ್ಟಗಳಿಗೆ ಈಡು ಮಾಡಿ, ಸಾಣೆ ಹಿಡಿದು , ಉಜ್ಜಿ ಹರಿಶ್ಚಂದ್ರನ ಸತ್ಯವನ್ನು ಜಗತ್ತಿಗೆ ತಿಳಿಯುವಂತೆ ಮಾಡಿದವನು ಕೌಶಿಕನು ತಾನೆ ?! ಗಮನಿಸಿ ಗೆಳೆಯರೇ ಸತ್ಯ ಬಿಡೆನೆಂಬ ಉದ್ದೇಶ ಹರಿಶ್ಚಂದ್ರ ರಾಯನದಾದರೆ , ಕೊನೆಯವರೆಗೂ ಕಟ್ಟುನಿಟ್ಟಾಗಿ ಪರೀಕ್ಷಿಸಿ ನೋಡಬೇಕೆಂಬುದು ಕೌಶಕರ ಗುರಿ. ಸತ್ಯಕ್ಕೇ ಜಯ ಸಿಕ್ಕಿತು. ಪರೀಕ್ಷಿಸಿದ ವಿಶ್ವಾಮಿತ್ರರೂ ಚರಿತಾರ್ಥರಾದರು. ಗೆಳೆಯರೇ, ನಾವೂ ಸಹ ಹಾಗೆಯೇ ಇರಬಹುದು. ಒಂದೇ ಮನಸ್ಸಿನ ವ್ರತಿಯಾಗಬೇಕಷ್ಟೆ. ಹಿಡಿದ ಕಾರ್ಯವನ್ನು ವ್ರತದಂತೆಮಾಡು ಸಾಕು. ಉದ್ದೇಶ ಒಳ್ಳೆಯದಿರಲಿ. ಆಗುವುದೂ ಸಹ ಒಳ್ಳೆಯದೇ ಆಗುತ್ತದೆ. ಜಗತ್ತಿನ ಜನರ ಸ್ತುತಿ ನಿಂದೆಗಳಿಗೆ ಕಿವಿಗೊಡದೇ ಸಾಗಯ್ಯ. ಬದುಕು ಎರಡು ದೋಣಿಯ ಮೇಲಿನ ಪಯಣವಾಗುವುದು ಬೇಡ. ಮನದ ಗೊಂದಲವನ್ನು ಬಿಟ್ಟು , ಒಮ್ಮನದ ವ್ರತಿಯಂತೆ ಕಾರ್ಯವೆಸಗು. ಯಶಸ್ಸು ನಿನಗೂ ಲಭಿಸುತ್ತದೆ. ಹೌದಲ್ಲವೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021