ನಾನೆನುವ ಭಾವದೊಳ
ಗಂಧನಾಗೇಕಳುವೆ !?
ನಿನ್ನದೇನಿಹುದಿಲ್ಲಿ
ಮನದಹಮ ಕಳೆಯೊ !
ವರ್ಜ್ಯಮೇನಾದೊಡಂ
ದುಃಖಮೀವುದುಮಲ್ತೆ !
ವರ್ಜ್ಯಮೆಂದಿಗು ವರ್ಜ್ಯ
ಜಾಣಮೂರ್ಖ //
ನಾವು ಏನೇ ಮಾಡಿದರೂ ನಮ್ಮ ಅಹಂಕಾರವನ್ನು ಮಾತ್ರ ಬಿಡಲಾಗುವುದಿಲ್ಲ. ಮನದ ಮೂಲೆಯೊಂದರಲ್ಲಿ ಅದು ಪ್ರತಿಷ್ಠಾಪಿತವಾಗಿಬಿಟ್ಟಿರುತ್ತದೆ. ಅದು ನಮ್ಮನ್ನು ಕುರುಡರನ್ನಾಗಿಸಿಬಿಡುತ್ತದೆ. ಇಂತಹಾ ಅಹಂಕಾರವನ್ನು ಕಿತ್ತೆಸೆಯಬೇಕಲ್ಲದೇ ಆಶ್ರಯ ನೀಡಬಾರದು. ಬದುಕಿನಲ್ಲಿ ವರ್ಜ್ಯವಾದುದು ಎಂದಿದ್ದರೂ ವರ್ಜ್ಯವೇ. ಬೆಂಕಿ ಬೆಂಕಿಯೇ ! ಎಂದಾದರೊಮ್ಮೆ ಸುಡದೇ ಬಿಡದು. ಮುಳ್ಳು ಮುಳ್ಳೆ ! ವಿಷವೆಂದಿಗೂ ವಿಷವೇ ! ಇವು ಎಂದಿಗೂ ಸಂತಸವನ್ನು ಕೊಡಲಾರವು. ಬದುಕಿನ ನಾನಾ ತೊಡಕುಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಈ ಅಹಂಕಾರವನ್ನು ವರ್ಜಿಸಿದರೆ ಒಳ್ಳೆಯದು. ನಿರಹಂಕಾರಿಯಾದವರನ್ನು ಕಂಡು ಜಗತ್ತು ತಡೆಯಲಾರದೇ ಕೆಣಕುವುದುಂಟು. ಸುಮ್ಮನಿದ್ದು ಬಿಡಿ ಗೆಳೆಯರೇ ! ನಿರ್ಲಕ್ಷಿಸಿ ಬಿಡಿ. ಎಷ್ಟೆಂದು ಕೆಣಕಿಯಾರು. ಅವರೂ ಸುಮ್ಮನಾಗುತ್ತಾರಷ್ಟೆ. ಮನದ ಹೂದೋಟವನ್ನು ನಮ್ಮ ಕಯ್ಯಾರೆ ನಾವೇ ಏಕೆ ಹಾಳ್ಗಯ್ಯಬೇಕು ? ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021