ಏರಿದವನಿಳಿಯುವನು
ಇಳಿದವನು ಏರುವನು
ಹಾವು ಏಣಿಯ ಆಟ
ವೀ ಬಾಳ ತಿರುಳು !
ದಾಳ ವಿಧಿಯಾಗಿರಲು
ಬೀಳ್ವ ಗರ ಕರ್ಮವೈ
ಇದನರಿತು ಬಾಳ್ ತೆರಳು
ಜಾಣಮೂರ್ಖ//
ಮೇಲೇರಿದವನು ಕೆಳಗಿಳಿಯಲೇಬೇಕು. ಕೆಳಗಿಳಿದವನು ಮೇಲೇರಲೇಬೇಕು. ಇದು ವಿಧಿ ನಿಯಮ. ಈ ಬದುಕು ಒಂದು ಹಾವು ಏಣಿಯ ಆಟವಿದ್ದಂತೆ. ಇದರ ತಿರುಳಿಷ್ಟೆ. ವಿಧಿಯೇ ದಾಳ. ಬೀಳ್ವಂತಹ ಗರ ನಮ್ಮ ಪೂರ್ವಾರ್ಜಿತ ಕರ್ಮಗಳು. ಸಂಚಿತ ಕರ್ಮಕ್ಕನುಸಾರವಾಗಿ ಮೇಲೇರುವುದೋ ಅಥವಾ ಕೆಳಗಿಳಿಯುವುದೋ ನಡೆಯುತ್ತಿರುತ್ತದೆ . ಇದರ ಒಳಮರ್ಮವನ್ನರಿತು ನಡೆಯುತ್ತಿರಬೇಕಷ್ಟೆ. ಬದುಕಿನ ಜೊತೆಗೆ ಸಾಗುತ್ತಿರಬೇಕು. ಉಬ್ಬರವಿಳಿತಗಳು , ಏಳು ಬೀಳುಗಳು ಇದ್ದವುಗಳೇ. ದುಷ್ಕೃತಗಳನ್ನಾಚರಿಸದೆ ಸುಕೃತಿಗಳನ್ನೆಸಗುತ್ತಾ ಸಾಗಿದವರು ಈ ಹಾವು ಏಣಿ ಆಟದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಈ ಯಶಸ್ಸೇ ಮುಕ್ತಿ ! ಮೋಕ್ಷ ! ಈ ಸತ್ಯವನ್ನು ಅರಿಯದ ಇಂದಿನ ಪೀಳಿಗೆಯ ಕೆಲವರು ಮೌಲ್ಯಾದರ್ಶಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ನೋಡುತ್ತಿದ್ದೇವೆ. ಇದು ಸರ್ವಥಾ ಒಳ್ಳೆಯದಲ್ಲ. ” ಮನುಷ್ಯರ ಸುಕೃತ ದುಷ್ಕೃತಂಗಳಂ ದೈವಗಳರಿಗುಂ ಎಂಬ ಮಾತಿದೆ ಪಂಚತಂತ್ರದಲ್ಲಿ . ಯಾವುದನ್ನೂ ಲಘುವಾಗಿ ಪರಿಗಣಿಸದೇ ಬದುಕಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಏನಂತೀರಿ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021