ಅಮ್ಮನೊಲವಿನ ಹಾಡಿ
ಗೆಲ್ಲಿಹುದು ಛಂದಗತಿ
ಸುಮ್ಮಗೊರಗುವ ಕಂದ
ನಾನಂದದಿಂದ !
ಬಣ್ಣಬೆಡಗಿರದ ನುಡಿ
ಗುರುವಿನೊಳ್ನುಡಿ ಕಾಣೊ
ನೊಂದಮನಕಾನಂದ
ಜಾಣಮೂರ್ಖ//
ಅಮ್ಮ ತನ್ನ ಪ್ರೀತಿಯ ಕಂದನಿಗಾಗಿ ಹಾಡುವ ಜೋಗುಳದ ಹಾಡಿಗೆ ಛಂದ , ಲಯ , ಪ್ರಾಸಗಳ ಲೆಕ್ಕಾಚಾರ ಹಾಕಿ ಹಾಡುವಳೇನು ? ಅಲ್ಲಿ ಪ್ರೇಮವೇ ಮುಖ್ಯ. ಮಗುವೂ ಸಹ ಜೋಗುಳವನ್ನು ಆಸ್ವಾದಿಸುತ್ತಾ ಆನಂದದಿಂದ ನಿದ್ರಿಸುತ್ತದೆ. ಅಲ್ಲಿ ತಾಯಿಗೆ ಒಂದು ರೀತಿಯ ಆನಂದವಾದರೆ ಕಂದನ ಆನಂದ ಮತ್ತೊಂದು ಬಗೆಯದು. ಎಂತಹಾ ದೈವೀಕ ಪ್ರೇಮವಲ್ಲಿ ಮೈದೋರುತ್ತದೆ !? ಅಂತೆಯೇ ಗುರುವಿನ ಹಿತ ಮಿತ ಮೃದು ಮಧುರವಾದ ಮಾತೂ ಕೂಡ. ಅಲ್ಲಿ ಬಣ್ಣ ಬೆಡಗಿರದು. ವೈಭವದ , ಕ್ಲಿಷ್ಟಕರವಾದ ಪದಪುಂಜಗಳಿರವು. ಕಿರಿದರಲ್ಲಿ ಹಿರಿದನ್ನು ಹಿಡಿದಿಟ್ಟು ಜ್ಞಾನದ ಆನಂದವನ್ನು ನೀಡುತ್ತಾನೆ ಗುರು. ಆ ಮಾತುಗಳು ಅಮೃತಸದೃಶವಾದವುಗಳಾಗಿದ್ದು ನೊಂದ ಮನಸ್ಸಿಗೆ ಸಾಂತ್ವನವನ್ನೂ ಆನಂದವನ್ನೂ ನಿಡುತ್ತವೆ. ತಾಯ ಜೋಗುಳ ಅದೆಷ್ಟು ಆನಂದವನ್ನು ನೀಡುವುದೋ ಅಂತೆಯೇ ಗುರುವಿನ ಸಾನಿಧ್ಯ, ನುಡಿಗಳೂ ಸಹ ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ತರುತ್ತವೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021