ಬದುಕಿನೊರೆಗಿಂ ಮಿಗಿಲೆ
ಶಾಲೆಯೊರೆ ಓ ಮರುಳೆ
ಬಾಳ ಹೊರೆ ಹೊರುವುದಕೆ
ಶಿಕ್ಷಣಮದಲ್ತೆ !?
ಸೋಲೆ ಬಾಳಿಗೆ ಬರೆಯ
ನೆಳೆವುದೆಂತಹ ಬಗೆಯೊ
ಮಾನವರಿಗಿದು ತರವೆ
ಜಾಣಮೂರ್ಖ //
ಈ ಮುಕ್ತಕವನ್ನು ಬಹಳ ನೊವಿನಿಂದ ಬರೆದಿದ್ದೇನೆ. ಔಪಚಾರಿಕವಾಗಿ ಬರೆಯೋ ಪರೀಕ್ಷೆಯಲ್ಲಿ ಅನುತ್ತೀರ್ಣತೆ ಪಡೆದ ಕೆಲವು ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವುದನ್ನು ಕಂಡು ನೊಂದು ಈ ಮುಕ್ತಕವನ್ನು ಬರೆದೆ. ಬದುಕಿನ ಭಯಂಕರ ಸಮಸ್ಯೆಗಳಿಗಿಂತ ಈ ಶಾಲೆಯ ಒರೆ ದೊಡ್ಡದೇನಲ್ಲ. ಬದುಕಿನ ಸಮಸ್ಯೆಗಳನ್ನೆದುರಿಸಲು ಇದೊಂದು ತರಬೇತಿ ಅಷ್ಟೆ. ಒಂದು ವೇಳೆ ಉತ್ತೀರ್ಣರಾಗುವಲ್ಲಿ ಸೋತೆವು ಎಂದರೆ ಸಾಯುವುದೇನು ? ಸಾವು ಇದಕ್ಕೆ ಪರಿಹಾರವೇನು ? ಬಾಳ ಹೊರೆ ಹೊರಲು ಪಡೆವ ತರಬೇತಿಯಲ್ಲಿ ಕಿಂಚಿತ್ ಸೋತ ಮಾತ್ರಕ್ಕೆ ಬಾಳಿಗೇ ಬರೆಯೇನು ? ಯೋಚಿಸಿ ಒಮ್ಮೆ. ಏಕೆ ನಮ್ಮ ಯುವ ಪೀಳಿಗೆ ಹೀಗೆ ಸಾಗುತ್ತಿದೆ ? ಭಗವಂತನಿಂದ ನೀಡಲ್ಪಟ್ಟ ಅಮೂಲ್ಯ ಕೊಡುಗೆ ಈ ಬದುಕು. ಈ ಬಾಳ ಸಾಗರವನ್ನೀಸುವುದು ಸುಲಭವೇನು ? ಓದಿ ಕೆಲಸ ಗಿಟ್ಟಿಸಿಬಿಟ್ಟರೆ ಬದುಕು ಸಾರ್ಥಕವಾಯ್ತೆ ? ಸಂಬಳ ಬಂದರಾಯ್ತೆ ? ಬೇರೇನೂ ಸ್ವಾರಸ್ಯವೇ ಕಾಣುತ್ತಿಲ್ಲವೇ ಈ ಬದುಕಿನಲ್ಲಿ ಇಂದಿನ ಮಕ್ಕಳಿಗೆ ? ಯಾಕೆ ಇವರೆಲ್ಲಾ ಅಮೃತ ಸದೃಶವಾದ ಬದುಕನ್ನು ಹೀಗೆ ಕಳೆಯುತ್ತಿದ್ದಾರೆ ಎನಿಸುವುದಿಲ್ಲವೇ ? ಇದಕ್ಕೆ ಅಂಕ ಮಾನದಂಡವಾಗಿಸೋದನ್ನು ಬಿಡೋಣ. ಜೀವನ ಪ್ರೀತಿಯ ಬಗ್ಗೆ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ಶಿಕ್ಷಣ ಸಿಗುವಂತಾಗಬೇಕು. ಬದುಕನ್ನು ಪ್ರೀತಿಸುವವರಾಗಬೇಕು ನಮ್ಮ ಮಕ್ಕಳು. ಕಲಿಕೆ ಸ್ವಾನುಭವದಿಂದಲೇ ಆಗಿ ಜ್ಞಾನದ ಆನಂದವನ್ನು ಪಡೆದವರಾಗಿ ಔಪಚಾರಿಕ ಶಿಕ್ಷಣದಿಂದ ಹೊರಬರಬೇಕು. ಬದುಕಿನಲ್ಲಿ ನಿರಂತರ ಕಲಿಯುತ್ತಿರಲೇಬೇಕೆಂಬ ಮನೋಭಾವ ಮಕ್ಕಳಲ್ಲಿ ನೆಲೆಗೊಳ್ಳಬೇಕು. ಅಂತಹಾ ಶಿಕ್ಷಣ ಅವಶ್ಯಕ. ಆದರೆ ಇಂದು ಅಂಕಗಳೇ ಮಾನದಂಡ , ಉದ್ಯೋಗವೇ ಗುರಿ ಇದೆಂತಹಾ ವಿಪರ್ಯಾಸ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021