ವಿಶ್ವಗುರು ಸಿರಿಹರಿಗೆ
ಸಾಂದೀಪಿನಿಯು ಗುರುವು !
ಬಿಲ್ಲಾಳು ಬೀಭತ್ಸು
ವಿಗೆ ದ್ರೋಣ ಗುರುವು !
ಗುರುವ ಮೀರ್ದವರಿವರು
ಅರಿವಿನೊಳು ಮಿಂದವರು
ಅರಿವಿಗಂಕದ ಮಂಕೆ
ಜಾಣಮೂರ್ಖ //
ಕೃಷ್ಣಂ ವಂದೇ ಜಗದ್ಗುರುಂ ಹೌದುತಾನೆ ? ಆದರೆ ಅಂತಹಾ ಶ್ರೀಕೃಷ್ಣನಿಗೆ ಸಾಂದೀಪಿನಿ ಮಹರ್ಷಿಗಳು ಗುರುಗಳಾಗಿದ್ದರು. ಮಹಾನ್ ಬಿಲ್ಲುಗಾರ ಅರ್ಜುನ. ಮೂರುಲೋಕದ ಗಂಡನೆಂದು ಖ್ತಾತಿವೆತ್ತ ಗಂಡು ! ಅವನ ಗುರು ದ್ರೋಣಾಚಾರ್ಯರು ! ದ್ರುಷ್ಟದ್ಯುಮ್ನನಿಂದ ಹತರಾದದ್ದು ದುರಂತವಾದರೂ ಸತ್ಯ ! ಈ ಕೃಷ್ಣಾರ್ಜುನರು ಗುರುವನ್ನು ಮೀರಿಸಿದ ಶಿಷ್ಯರು. ಗುರುಗಳು ಬಿತ್ತರಿಸಿದ ಅರಿವಿನ ಅಗಾಧ ನರೆವಿಯಲ್ಲಿ ಮಿಂದವರು. ಗುರುವಿಗಿಂತಲೂ ತುಸು ಹೆಚ್ಚಾಗಿಯೇ ಕೃಷಿಗೈದು ದಿಟ್ಟರಾಗಿ ನಿಂತು ಏಕಮೇವಾದ್ವಿತೀಯರು ಎನಿಸಿದವರು. ಇಂತಹಾ ಮಹಾ ಮಹಿಮರು ಪುರಾಣ ಇತಿಹಾಸವನ್ನು ಬೆದಕಿದರೆ ಸಾವಿರಾರು ಜನ ಸಿಗುತ್ತಾರೆ. ಅವರೆಲ್ಲರೂ ವಿನಯಗುಣ ಸಂಪನ್ನರೆಬುದನ್ನೂ ನಾವು ಮರೆಯಬಾರದು. ಗಮನಿಸಿ ಅವರಿಗಾರಿಗೂ ಅಂಕ ಮಾನದಂಡವಾಗಿರಲಿಲ್ಲ ! ಪ್ರತಿಭೆ ಮಾನದಂಡವಾಗಿತ್ತು. ಗುರು ಪ್ರತಿಭಾವಂತನಿವ ಎಂದು ಘೋಷಿಸಿದರೆ ಮುಗಿಯುತ್ತಿತ್ತು. ಇಂದು ಗುರುವಿನ ಘೋಷಣೆಯಿಲ್ಲ. ಯಾರೋ ಗುರು ! ಯಾರೋ ಶಿಷ್ಯ ! ಯಾರೋ ಮೌಲ್ಯಮಾಪಕರು ! ಮೌಲ್ಯಮಾಪನಕ್ಕೆ ಅಂಕೆ ಸಂಖ್ಯೆಗಳ ಯಾಂತ್ರಿಕವಾದ ಮಾನದಂಡ ! ಅರಿವಿಗೆ ಅಂಕದ ಮಂಕು. ಅಂಕ ಬಂದರೆ ಆಯ್ತು ! ಅಂಕದ ಪರದೆ ಬಿದ್ದಂತೆ ! ಅದಕ್ಕೊಂದು ಪ್ರಮಾಣ ಪತ್ರ ! ಕೊಡುವವರು ಯಾರೋ ! ಇನ್ನು ಪ್ರತಿಭೆಯ ಮಾತು ಬಿಡಿ ಪ್ರತಿಭಾ ಪಲಾಯನವೇ ಸರಿ. ದಿನದಿಂದ ದಿನಕ್ಕೆ ಎಲ್ಲೋ ಎಡವುತ್ತಿದ್ದೇವೆ ಎನಿಸುತ್ತಿಲ್ಲವೇ ಗೆಳೆಯರೇ !? ಇದು ಮುಂದೆ ಎಲ್ಲಿಗೆ ಹೋಗಿ ಮುಟ್ಟುವುದೋ ಭಗವಂತನೇ ಬಲ್ಲ ! ಕಿಂಚಿತ್ ಬದಲಾವಣೆ ಬೇಕಿದೆ. ಅದೇನು ? ಹೇಗಿರಬೇಕು ? ಎಂದು ಸುಸಂಸ್ಕೃತ , ಭವ್ಯ ಭಾರತದ ಸಂಸ್ಕಾರವಂತ ಪ್ರಜೆಗಳಾದ ನಾವೆಲ್ಲರೂ ಚಿಂತಿಸೋಣ. ನಮ್ಮ ಮಕ್ಕಳನ್ನು ಅಂಕದ ದಾಸರಾಗಿಸೋದು ಬೇಡ. ಪ್ರತಿಭಾ ನವನವೋನ್ಮೇಷ ಶಾಲಿನಿ ಅಲ್ಲವೇ ! ಅಂತಹಾ ಪ್ರತಿಭಾ ಸಾಗರದಲ್ಲಿ ಈಜಲು ಬಿಡೋಣ. ಅವರ ಸೃಜನ ಶೀಲ ಗುಣದ ನಿಜವಾದ ಮೌಲ್ಯ ಮಾಪಕರು ನಾವಾಗಿ , ನಮ್ಮ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸಿ, ಅವರಿಗೊಂದು ಸುಸಜ್ಜಿತ ಬದುಕನ್ನು ನೀಡಬೇಕಾದ ಅವಶ್ಯಕತೆ ಇದೆ. ಬಾಲ್ಯದೊಳ್ ಮಕ್ಕಳಿಗೆ ಅಕ್ಕರದ ವಿದ್ಯೆಯಂ ಕಲಿಸದಿರ್ದೊಡೆ ಕೊಂದಂ ಎಂದಿದ್ದಾರೆ ಕವಿ ಚೂಡಾರತ್ನ. ಏನಂತೀರಿ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021