Write to us : Contact.kshana@gmail.com

ಆಷಾಢದಲ್ಲಿ ನಕ್ಷತ್ರವೂ ಕಾಣಿಸುವುದಿಲ್ಲ…

4.2
(17)

ರಾತ್ರಿ ಬಸ್ಸಿಗೆ ಯಾರು ಬರ್ತಾರೋ ಹೇಳೋಕೆ ಆಗೋಲ್ಲ ಒಂದರ್ಧ ಸೇರು ಅಕ್ಕಿ ಜಾಸ್ತಿನೇ ಹಾಕು ನೀರು ಮರಳ್ತಾ ಇದೆ ಇದೊಂದು ದನದ್ದು ಹಾಲು ಕರೆದು ಬರ್ತೀನಿ ಅಂತ ಅಜ್ಜಿ ಹೇಳಿದಾಗ ಹೂ ಅಂದು ಒಳಗೆ ಬಂದಿದ್ದೆ. ಒಳಗೆ ಕಟ್ಟಿಗೆ ಒಲೆಯ ಮೇಲಿಟ್ಟ ತಪ್ಪಲೆಯಲ್ಲಿ ನೀರು ಮರಳುವ ಸದ್ದು ಕೇಳಿಸುತಿತ್ತು. ಜಗುಲಿಯಲ್ಲಿ ಅದಾಗಲೇ ಮಾತಿನ ಮಳೆ ಶುರುವಾಗಿತ್ತು. ಮರುದಿನ ಅನಂತನ ವ್ರತ. ಹಾಗಾಗಿ ಹತ್ತಿರದ ಆದರೆ ದೂರದಲ್ಲಿ ಇರುವ ನೆಂಟರು ಬರುವ ನಿರೀಕ್ಷೆ. ಅಕ್ಕಿ ಅಳೆಯಲು ಹೋಗುವಾಗ ಅರ್ಧ ಸೇರು ಎಲ್ಲಿ ಸಾಕಾಗುತ್ತೆ ಮಾವಿನಕೊಪ್ಪದವರು, ತಲ್ಲೂರು ಅಂಗಡಿ ಮಾವ ಎಲ್ಲಾ ಬಂದರೆ ಅನ್ನಿಸಿ ಇನ್ನರ್ಧ ಸೇರು ಜಾಸ್ತಿ ಹಾಕಿ ತೊಳೆದು ತಪ್ಪಲೆಗೆ ಸುರಿದು ಜಗುಲಿಯಲ್ಲಿ ಅದಾಗಲೇ ರಂಗೇರಿದ್ದ ಮಾತು ಕೇಳುತ್ತಾ ಮೈ ಮರೆತವಳಿಗೆ ಅಯ್ಯೋ ಎಲ್ಲಾ ಬಿಟ್ಟು ಇವಳಿಗೆ ಕೆಲಸ ಹೇಳಿದ್ನಲ್ಲ ಮಾಡೋದೆಲ್ಲ ಅವಾಂತರವೇ ಅನ್ನುವ ಬೈಯುವ ಸದ್ದಿಗೆ ಎಚ್ಚರವಾಯ್ತು.

ಎಲ್ಲರೆದುರು ಬೈಸಿಕೊಳ್ಳುವ ರಗಳೆ ಯಾಕೆ ಅಂತ ಏನೇ ಎಂದು ಪಿಸುದನಿಯಲ್ಲೇ ಕೇಳುತ್ತಾ ಒಳಗೆ ಅಡಿಯಿಟ್ಟರೆ ಎಷ್ಟು ಅಕ್ಕಿ ಹಾಕಿದ್ಯೇ ಅನ್ನುವ ಸ್ವರದ ತೀವ್ರತೆಗೆ ಬೆಚ್ಚಿ ಹೇಳಿದರೆ ಅಯ್ಯೋ ಒಂದು ಸೇರು ಅಕ್ಕಿ ಬೇಯುವ ಪಾತ್ರೆಗೆ ಒಂದೂವರೆ ಸೇರು ಹಾಕಿದರೆ ಅನ್ನ ಆಗುತ್ತೇನೆ ಕರ್ಮ ನಂದು ಅನ್ನುತ್ತಲ್ಲೇ ಎದುರಾದ ಅತ್ತೆಗೆ ಅದ್ಯಾವ ಕುಬೇರ ವಂಶದಲ್ಲಿ ಹುಟ್ಟಿತ್ತೋ ಹೋದ ಜನ್ಮದಲ್ಲಿ ಕೈ ದೊಡ್ಡ ಒಂದು ಸೇರು ಹಾಕುವಲ್ಲಿ ಎರಡು ಸೇರು ಹಾಕುತ್ತೆ ಅಂತ ಗೊಣಗುತ್ತಲೇ ಅನ್ನವನ್ನು ಸಂಭಾಳಿಸುವ ಕೆಲಸಕ್ಕೆ ತೊಡಗಿದ್ದಳು. ಹಾಗೆ ಕಲಿಸಿದ್ದು ನೀನೆ ಅಲ್ವೇನೆ ಅನ್ನೋಕೆ ಹೊರಟವಳು ಪರಿಸ್ಥಿತಿಯ ಗಂಭೀರತೆ ನೋಡಿ ಉಸಿರೆತ್ತದೆ ಹೊರಗೆ ಬಂದಿದ್ದೆ.

ಮಲೆನಾಡು ಇದ್ದದ್ದೇ ಹಾಗೇ. ಅಲ್ಲೊಂದು ಇಲ್ಲೊಂದು ಮನೆ, ಕಾಡ ನಡುವಿನ ಹಾದಿ. ವಾಹನಗಳು  ಅಂಗಳಕ್ಕೆ ಕಾಲಿಡುವ ಆರ್ಥಿಕ ಪರಿಸ್ಥಿತಿ ಇನ್ನೂ ಬಂದಿರಲಿಲ್ಲ. ಬಂದ ಒಂದಷ್ಟು ಮನೆಗಳಿಗೆ ಕೊಂಡರೂ ಸರಿಯಾದ ರಸ್ತೆಯಿರದೇ ಕಾರಣ ತರುವ ಮನಸ್ಸೂ ಮಾಡಿರಲಿಲ್ಲ. ಇನ್ನು ರಸ್ತೆಯೇ ಇಲ್ಲದ ಮೇಲೆ ಬಸ್ಸು ಬರುವುದಾದರೂ ಎಲ್ಲಿಂದ? ಹಾಗಾಗಿ ನಡೆದು ಹೋಗುವುದು ಸರ್ವೇ ಸಾಮಾನ್ಯವಾಗಿತ್ತು. ಬಸ್ ಬಂದರೂ ಮನೆ ಸೇರಲು ಮೈಲುಗಟ್ಟಲೆ ನಡಿಯಲೇ ಬೇಕಿತ್ತು. ಯಾವುದೋ ಗದ್ದೆಯ ಬದಿಯಲ್ಲೋ, ತೋಟದ ಬುಡದಲ್ಲೋ, ಗುಡ್ಡದ ಮೇಲೋ ಇರುವ ಮನೆಗೆ ಅಂಕು ಡೊಂಕು, ಹತ್ತಿಳಿಯುವ ದಾರಿಯೇ ಗತಿ. ಅಲ್ಲೆಲ್ಲೋ ಗದ್ದೆಯ ಅಂಚು ದಾಟಿ, ಸಂಕದ ಮೇಲೆ ನಡೆದು, ಗುಡ್ಡ ಹತ್ತಿ ಹೋಗುವ ವಾಹನವಾದರೂ ಎಲ್ಲಿತ್ತು? ಹಳ್ಳಿ ಹಳ್ಳಿಗಳ ನಡುವಿನ ಸಂಪರ್ಕ್ಕಕ್ಕೆ ನಡಿಗೆಯೇ ಇದ್ದ ಏಕೈಕ ಮಾರ್ಗ.

ಹಾಗೆ ಸಾಗುವಾಗ ಮಾರ್ಗ ಮಧ್ಯೆ ಸಿಗುವ ಊರು, ಅಲ್ಲಿಯ ಮನೆಗಳೇ ತಂಗುದಾಣಗಳು. ಕತ್ತಲೆಯಾದರೆ, ಆಯಾಸವಾದರೆ, ಊಟದ ಸಮಯವಾದರೆ, ಬಾಯಾರಿಕೆಯಾದರೆ, ಕಾಫಿ ಬೇಕು ಅನ್ನಿಸಿದರೆ, ಹಸಿವು, ನಿದ್ರೆ ಕಾಡಿದರೆ ಹೀಗೆ ದಾರಿಯ ಮಧ್ಯದಲ್ಲಿ ಸಿಗುವ ಮನೆಯೇ ಆಶ್ರಯ ತಾಣ. ಪರಿಚಯವಿರಲೇ ಬೇಕು, ಗೊತ್ತಿರಲೇ ಬೇಕು ಅನ್ನುವ ನಿಯಮವಿಲ್ಲದೆ ಯಾವ ಊರಿನ ಯಾವ ಮನೆಯಾದರೂ ಬಂದವರನ್ನು ಸ್ವಾಗತಿಸಿ ಕಾಲು ತೊಳೆಯಲು ನೀರು , ಬಾಯಾರಿಕೆಗೆ ಕೊಟ್ಟು ನಂತರವೇ ಕುಶಲ ವಿಚಾರಿಸುತ್ತಿತ್ತು. ಪರಿಚಯ ಕೇಳುತ್ತಿತ್ತು. ಸಮಯಕ್ಕೆ ಸರಿಯಾದ ಉಪಚಾರ ಮಾಡುತಿತ್ತು. ಹಾಗಾಗಿ ಪ್ರತಿ ಮನೆಯಲ್ಲೂ ಮಧ್ಯಾನದ ಊಟಕ್ಕೆ ಅಕ್ಕಿ ಅಳೆಯುವಾಗ ಇಂತಹಾ ಅತಿಥಿಗಳ ಸಲುವಾಗಿ ಒಂದು ಮುಷ್ಠಿ ಅಕ್ಕಿ ಹೆಚ್ಚಿಗೆ ಹಾಕುತ್ತಿದ್ದರು. ಯಾರೂ ಹಸಿದು ಹೋಗಬಾರದು ಅನ್ನೋದು ಅಲಿಖಿತ ನಿಯಮ ಸಂಪ್ರದಾಯ ಎರಡೂ ಆಗಿತ್ತುಅಕ್ಕಿ ಅಳೆಯುವಾಗ ಒಂದು ಮುಷ್ಠಿ ಜಾಸ್ತಿ ಹೇಗೆ ಹಾಕುತಿತ್ತೋ ಹಾಗೆ ಒಂದು ಚೂರು ತೆಗೆದು ಪಕ್ಕದ ಡಬ್ಬಿಯಲ್ಲಿ ಹಾಕಿಡುವುದು ಮಲೆನಾಡಿನಲ್ಲಿ ಒಂದು ಕಾಲದಲ್ಲಿ ಪದ್ದತಿಯಾಗಿತ್ತು. ಆ ಡಬ್ಬ ತುಂಬಿದ ಮೇಲೆ ಅದನ್ನು ಹೊರನಾಡಿಗೆ ಹೋಗುವವರ ಕೈಯಲ್ಲಿ ಕಳುಹಿಸುತ್ತಿದ್ದರು. ಮನೆ ಅಂತ ಮಾಡಿದ ಮೇಲೆ ಅನ್ನದಾನ ಮಾಡಬೇಕು ಅಕಸ್ಮಾತ್ ಮನೆಯಲ್ಲಿ ನಿತ್ಯ ಅನ್ನದಾನ ಜರುಗದಿದ್ದರೂ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಜರುಗುವ ನಿತ್ಯ ಅನ್ನದಾನಕ್ಕೆ ಕಿಂಚಿತ್ ಸೇವೆಯಾದರೂ ಸಲ್ಲಬೇಕು ಅನ್ನೋದು ನಂಬಿಕೆಯಾಗಿತ್ತು. ಹಾಗಾಗಿ ಪ್ರತಿ ಮನೆಯೂ ಆ ಪದ್ದತಿಯನ್ನು ಅನುಸರಿಸುತಿತ್ತು.

ಮನೆಗೆ ಯಾರಾದರೂ ಬಂದರೆ ಸಂಭ್ರಮಿಸು ಕಾಲವದು. ಫೋನೂ ಪತ್ರಿಕೆ, ದೂರದರ್ಶನ ಇದ್ಯಾವುದೂ ಅಷ್ಟಾಗಿ ಕಾಲಿಟ್ಟಿರದ ಆ ಕಾಲದಲ್ಲಿ ಬರುವ ಅತಿಥಿಗಳೇ ಸುದ್ದಿವಾಹಕರು. ಒಂದೂರಿನ ಸುದ್ದಿ ಇನ್ನೊಂದು ಊರಿಗೆ ಕೊಂಡೊಯ್ಯುವ ಓಲೆಗಾರರು. ಪಕ್ಕದೂರಿಗೆ ಕೊಟ್ಟ ಮಗಳ ಸುದ್ದಿ ತಿಳಿಯಲು, ತಿಳಿಸಲು, ಯಾವುದಾದರೂ ವಿಶೇಷ ನಡೆದರೆ ತಿಳಿಯಲು, ಜಗತ್ತಿನ ಆಗು ಹೋಗುಗಳು ಗೊತ್ತಾಗಲು, ಸುದ್ದಿ, ಸ್ವಾರಸ್ಯ, ವಿಶ್ಲೇಷಣೆ, ಚಿಂತನೆ ಇವುಗಳೆಲ್ಲವೂ ಹೀಗೆ ಹೋಗುವ ಪ್ರಯಾಣಿಕರನ್ನು ಅವಲಂಬಿಸಿತ್ತು. ಹಾಗಾಗಿ ಯಾರೇ ಬಂದರೂ ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ಮಾತಿಗೆ ಏನೂ ಕಡಿಮೆ ಇರುತ್ತಿರಲಿಲ್ಲ, ಹಾಗಾಗಿ ಯಾರಿಗೂ ಅಪರಿಚಿತ ಭಾವ ಕಾಡುತ್ತಿರಲಿಲ್ಲ. ಒಮ್ಮೆ ಪರಿಚಯವಾದ ಮೇಲೆ ಮತ್ತಿನ್ನೇನು ಅವರು ಬಳಗಕ್ಕೆ ಸೇರಿ ಹೋಗುತ್ತಿದ್ದರು. ಹೀಗೆ ಬಳಗ, ಬದುಕು ಎಲ್ಲವೂ ತನ್ನಷ್ಟಕ್ಕೆ ತಾನೇ ಬೆಳೆಯುತ್ತಿತ್ತು.

ಬಂದವರೂ ಹಾಗೆಯೇ ಇದ್ದದ್ದಕ್ಕೆ ಹೊಂದುಕೊಂಡು, ಅತಿಥ್ಯವನ್ನು ಸ್ವೀಕರಿಸಿ ಅವರನ್ನು ಗೌರವಿಸಿ ಮುಂದಕ್ಕೆ ಹೋಗುತ್ತಿದ್ದರು. ಹಾಗಾಗಿ ಕೊಡುವುದರಲ್ಲಿ ಹಮ್ಮಾಗಲಿ, ಪಡೆಯುವುದರಲ್ಲಿ ಅವಮಾನವಾಗಲಿ ಇರುತ್ತಿರಲಿಲ್ಲ. ಆ ಸಮಯಕ್ಕೆ ಏನು ಮಾಡಿರುತ್ತಿದ್ದರೋ ಅದನ್ನೇ ಪ್ರೀತಿಯಿಂದ ಬಡಿಸಿದರೆ ಸಿಕ್ಕಿದ್ದಕ್ಕೆ ಅಷ್ಟೇ ತೃಪ್ತಿಯಿಂದ ಖುಷಿಯಿಂದ ಸ್ವೀಕರಿಸುತ್ತಿದ್ದರು. ಯಾವುದೋ ಊರಿನ ಹುಡುಗನಿಗೆ ಇನ್ಯಾವುದೋ ಊರಿನ ಹೆಣ್ಣು ಜೋತೆಯಾಗುತ್ತಿದ್ದದ್ದು ಇಂಥ ಮಧ್ಯಸ್ಥಿಕೆಯಿಂದಲೇ. ಒಬ್ಬರ ಬಗ್ಗೆ ಇನ್ನೊಬ್ಬರು ಸರಿಯಾಗಿ ತಿಳಿದುಕೊಳ್ಳುತ್ತಿದ್ದದ್ದೂ ಹೀಗೆ ಸಾಗುವ ಪ್ರಯಾಣಿಕರಿಂದಲೇ. ಒಂದಲ್ಲ ಒಂದು ಊರಿಗೆ ತಾವು ಪ್ರಯಾಣಿಕರಾಗಿ ಹೋಗುವುದರಿಂದ ಎಲ್ಲರೂ ಅತಿಥಿಗಳೇ. ಹಾಗಾಗಿಯೇ ಇನ್ನೊಬ್ಬರನ್ನು ಸತ್ಕರಿಸುವುದು ಸಹಜ ಕ್ರಿಯೇಯಾಗಿತ್ತೆ ವಿನಃ ಅದನ್ನು ಹೆಚ್ಚುಗಾರಿಕೆಯೆಂದು ಯಾರೂ ಭಾವಿಸುತ್ತಿರಲಿಲ್ಲ.

ಇಂತ ಕಾಲಘಟ್ಟದಲ್ಲಿ ಬೆಳೆದುಬಂದವಳು ಮದುವೆಯಾಗಿ ಪಟ್ಟಣಕ್ಕೆ ಬಂದಾಗ ಇಲ್ಲಿನ ನಾಗರಿಕತೆಗೆ ಹೊಂದಿಕೊಳ್ಳುವುದು ಕಷ್ಟವೇ ಆಗಿತ್ತು. ಮೊದಮೊದಲು ಆಫೀಸು ಕೆಲಸ ಅಂತ ಧಾವಂತದ ಬದುಕಿನಲ್ಲಿ ಮುಳುಗಿ ಹೋಗಿ ಯೋಚಿಸಲು ಸಮಯಸಿಕ್ಕದೆ ಹೋಗಿ ಮರೆತು ಹೋದ ಹಾಗಿದ್ದರೂ ಮಗಳು ಹುಟ್ಟಿದ ಮೇಲೆ ಮನೆಯಲ್ಲಿ ಇರಲು ಶುರುಮಾಡಿದ ಮೇಲೆ ಖಾಲಿ ಖಾಲಿ ಮನೆ. ಬಾಗಿಲು ಮುಚ್ಚಿದ ಅಕ್ಕಪಕ್ಕದ ಮನೆಗಳು ಸೆರೆಮನೆಯನ್ನು ನೆನಪಿಸುವ ಹಾಗಾಗಿ ಹುಚ್ಚು ಹಿಡಿಯುವುದು ಒಂದು ಬಾಕಿ. ವರ್ಷಕ್ಕೊಮ್ಮೆ ಬರುವ ಮನೆಯವರು ಬಿಟ್ಟು ಬೇರೆ ಯಾರೂ ಬರುವುದಿಲ್ಲವಲ್ಲ ಅನ್ನುವ ಸಂಕಟ. ಮನೆಗೆ ಯಾರಾದರೂ ಬಂದರಂತೂ ಮಗಳಿಗೆ ಅಂದು ಹಬ್ಬ, ಹೊರಟು ನಿಂತರೆ ಬೇಸರ. ಇಲ್ಲಿ ಇದ್ದ ಮೇಲೆ ಇಲ್ಲಿಯ ಬದುಕು ಅಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಅಂತ ರಚ್ಚೆ ಹಿಡಿವ ಮನಸ್ಸಿಗೆ ಸಮಾಧಾನ ಮಾಡುವ ಜರೂರತ್ತು. ಅಕ್ಕಿ ಹಾಕುವಾಗ ಎಷ್ಟೋ ಸಲ ಅಭ್ಯಾಸ ಬಲದಿಂದ ಒಂದು ಮುಷ್ಠಿ ಅಕ್ಕಿ ಹೆಚ್ಚಿಗೆ ಹಾಕಿ ಅದು ರಾತ್ರಿಗೆ ತಂಗಳಾಗಿ ಉಳಿಯುವಾಗ ಕಾಡುವ ಊರ ನೆನಪು.

ಇಲ್ಲೇ ಬಂದಿದ್ದೆ ಕಣೆ ಹಾಗೆ ಬಂದೆ ಅಂದ ತಮ್ಮನಿಗೆ ಊಟ ಆಯ್ತೇನೋ ಅಂದರೆ ಕೇಳದವನ ಹಾಗೆ ನಿಂತಿದ್ದು ನೋಡಿಯೇ ಮಾಡು ಬಾ ಎಂದು ತಟ್ಟೆ ಕೊಟ್ಟರೆ ಇದ್ಯೇನೆ ಅಂದ .ಕುಕ್ಕರ್ ಮುಚ್ಚುಳ ತೆರೆದವಳ  ನೋಡುತ್ತಾ ಪರ್ವಾಗಿಲ್ವೇ ಇನ್ನೂ ಪೇಟೆಲಿದ್ದರೂ ಹಳ್ಳಿ ಬುದ್ಧಿ ಬಿಟ್ಟಿಲ್ಲ ಅಂದ.  ಅಜ್ಜಿಯ ನೆನಪಾಯಿತು.  ಹಿಡಿ ಅನ್ನ ಇಲ್ಲ ಅನ್ನಬಾರದು  ಎನ್ನುವುದು ಬರೀ ಅನ್ನಕ್ಕೆ ಮಾತ್ರ ಸಂಬಂಧಿಸಿದ್ದಾ … ಅಲ್ಲ ಎಂದು ಅವಳಿಗೆ  ಹೇಳೋಣವೆಂದರೆ ಈ ಆಷಾಢದಲ್ಲಿ ನಕ್ಷತ್ರವೂ ಕಾಣಿಸುವುದಿಲ್ಲ…

How do you like this post?

Click on a star to rate it!

Average rating 4.2 / 5. Vote count: 17

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

Shobha Rao

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಕಾರಣವನರಿ ಮೊದಲು