ಮರುಳು ಹೋಗೋ ನಮ್ಮ ಜನಕ್ಕೆ, ಹೋಗಲಿ ಜರ್ನಲಿಸಂ ಓದಿಯೂ ನಿಜಾಂಶ ಪತ್ತೆ ಹಚ್ಚದೆ ಮನಸೋ ಇಚ್ಛೆ ಸುದ್ದಿ ಹಬ್ಬಿಸುವ ಪ್ರಯತ್ನಕ್ಕೆ ಉಗಿಯಬೇಕೋ ಅಥವಾ ಜನರ ಈ ವೀಕ್ನೆಸ್ಸ್ ಉಪಯೋಗಿಸಿಕೊಂಡು ಫೇಮಸ್ ಆಗಲು ಹೋರಟ ಆ ೨೨ ವರ್ಷದ ಹುಡುಗನನ್ನು ಬೈಯಬೇಕೋ ಗೊತ್ತಾಗುತ್ತಿಲ್ಲ. ನಾನು ನೋಡಿದ್ದು ಆತನ ಒಂದು ವಿಡಿಯೋ. ಅದರಲ್ಲಿ ಆತ ಹೇಳಿಕೊಂಡಿರುವುದು ಹೀಗೆ ” ಪ್ರಾಬ್ಲಮ್ ಏನಾಗ್ತಾ ಇತ್ತು ಅಂದ್ರೆ ಫಸ್ಟ್ ಸ್ಟೇಷನ್ ನಿಂತಿದ್ದು ಸೆಕೆಂಡ್ ಸ್ಟೇಷನ್ ಬರುವಷ್ಟರಲ್ಲಿ ೧೨ ಸೆಕೆಂಡಿಗೆ ೧೩ ಸೆಕೆಂಡಿಗೆ ಡೋರ್ ಕ್ಲೋಸ್ ಆಗ್ತಾ ಇತ್ತು. ಎರಡು ಬಾಕ್ಸ್ ಮೂರು ಬಾಕ್ಸ್ ತಳ್ಳುವಷ್ಟರಲ್ಲಿ ಇನ್ನು ಎಂಟು ಹತ್ತು ಬಾಕ್ಸ್ ಹಿಂದಿನ ಸ್ಟೇಷನ್ ನಲ್ಲಿ ಉಳಿದುಹೋಗುತ್ತಿತ್ತು. ಮತ್ತೆ ೬೦ ಕಿಲೋಮೀಟರು ೭೦ ಕಿಲೋಮೀಟರು ವಾಪಸ್ ಬಂದು ಬಾಕ್ಸ್ ಎತ್ತಿಕೊಂಡು ಬರ್ತಾ ಇದ್ದೆ. ಈ ತರಹ continuous ೬-೭ ಸ್ಟೇಷನ್ ಗಳಲ್ಲಿ ಆಯಿತು. ಯಾವಾಗ ಎರಡು ದಿನ ಅಂತ ಅಂದುಕೊಂಡಿದ್ದೆ ಅದು ಮೂರು ದಿನ ಆಗಿ ಹೋಯಿತು. ನನ್ನ ಹತ್ತಿರ ಇದ್ದ ಹಣ ಎಲ್ಲ ಕಾಲಿ ಆಗಿ ಹೋಯಿತು. ನನ್ನ ಮೈಮೇಲೆ ಇದ್ದ ಬಟ್ಟೆ ಬಿಟ್ಟರೆ ನನ್ನ ಹತ್ತಿರ ಏನೂ ಇರಲಿಲ್ಲ ಅವತ್ತು. ಪ್ರೊಜೆಕ್ಟ್ ಅಷ್ಟು ತೂಕ ಇದೆ. ಇನ್ನು ಬಟ್ಟೆ ಯಾಕೆ ಅಂತ ಒಂದು ಕರ್ಚೀಫೂ ತಗೊಂಡು ಹೋಗಿರಲಿಲ್ಲ. ಕೊನೆಯ ರೈಲ್ವೆ ಸ್ಟೇಷನ್ ಬಂದು ತಲುಪಿದಾಗ ನನಗೆ ಒಂದು ವಿಷಯ ಗೊತ್ತಾಯಿತು, ಇನ್ನೂ ನನ್ನ ಲಗೇಜ್ ಇಟ್ಟುಕೊಂಡು ಎಂಟೂವರೆ ಕಿಲೋಮೀಟರು ನೆಡೆದುಕೊಂಡು ಹೋಗಬೇಕಾಯ್ತು ಅಂತ. ನಂಗೆ ಭೂಮಿನೇ ಕುಸಿದು ಹೋದ ಹಾಗೆ ಆಯಿತು. ಎತ್ಕೊಂಡ್ ಹೋಗ್ತಾ ಇದ್ದೆ. ಸೈಡಲ್ಲಿ ಇಟ್ಟೆ , ಮತ್ತೆ ಎತ್ಕೊಂಡೆ, ಮತ್ತೆ ಇಟ್ಟೆ , ಬೆಂಚ್ ಮೇಲೆ ಮಲ್ಕೊಂಡೆ. ಪ್ರತೀ ಸರಿ ಕುಸಿದು ಬಿದ್ದಾಗ ನಾನು ನೆಡೆದು ಬಂದ ದಾರಿ ತಂದೆ ತಾಯಿ ನೆನಪು ಬರ್ತಾ ಇದ್ರು. ಕೊನೆಗೆ ನಾನು ಎಕ್ಸಿಬಿಷನ್ ಸೆಂಟರ್ ರೀಚ್ ಆದೆ. ಅಲ್ಲಿ ಒಂದು ಸಿಗ್ನೇಚರ್ ಹಾಕಿದೆ ಅಷ್ಟೇ. ಆ ಒಂದು ಸಿಗ್ನೇಚರ್ ಗೆ ಅಂತಹ ವ್ಯಾಲ್ಯೂ ಇದೆ ಅಂತ ನನಗೆ ಗೊತ್ತಿರಲಿಲ್ಲ. ಆ ಒಂದು ಸಿಗ್ನೇಚರ್ ಗೆ ಆಪಲ್ ಐಪ್ಯಾಡ್, ಆಪಲ್ ಐಪೋಡ್ , ಆಪಲ್ ಲ್ಯಾಪ್ಟಾಪು , ಆಪಲ್ ಐಫೋನ್ ಎಲ್ಲಾ ಆಪಲ್ accesaries ನಾಲ್ಕು ಲಕ್ಷ ಬೆಲೆ ಬಾಳೋದು ಕೊಟ್ರು. ಇದಕ್ಕೆ ಹಣ ಕಟ್ಟಬೇಕಾ? ಇಲ್ಲಾ ಫ್ರೀ ಅಂತ ಹೇಳಿದ್ರು. ಏನಕ್ಕೆ ಕೊಟ್ರು ಅಂದ್ರೆ, ನಮ್ಮ ತಂದೆ ಎಂಪಿ ಅಂತ ಕೊಡಲಿಲ್ಲ. M L A ಅಂತ ಕೊಡಲಿಲ್ಲ. ಬಿಸಿನೆಸ್ ಮ್ಯಾನ್ ಅಂತ ಕೊಡಲಿಲ್ಲ. ನನ್ನಲ್ಲಿರೋ knowledge ಗೆ ಕೊಟ್ರು. …. ಅಲ್ಲಿ ತಂಕ ೫೦೦ ರೂಪಾಯಿ ಹೋಟೆಲಿನಲ್ಲಿ ಉಳಿದಿರಲಿಲ್ಲ. ಕರ್ಕೊಂಡ್ ಹೋದ್ರು ಕಾರಲ್ಲಿ. ಹೋಟೆಲಿನ ಒಂದು ದಿನದ ಖರ್ಚು ೮೬೦೦೦ ರೂಪಾಯಿಗಳು. ರೂಮೊಳಗೆ ಐದು ಬೆಡ್ ರೂಮ್ ಇದೆ, ೩ ಕಿಚನ್, ೫ ಬಾತ್ರೂಮ್ ಎಲ್ಲಾ ಇದೆ. ನನಗೆ ಇಬ್ರು ಬಟ್ಲರ್ ಕೊಟ್ಟಿದಾರೆ, ಇಬ್ಬರನ್ನು ನನ್ನ schedule ನೋಡಿಕೊಳ್ಳೋಕೆ, ನಂದು ಮತ್ತೆಲ್ಲಾ ಕಾಲ್ಸ್ ಹ್ಯಾಂಡಲ್ ಮಾಡೋಕೆ ಒಬ್ಬರು ಪಿ ಎ ಕೊಟ್ಟಿದಾರೆ….. ” ಮುಂದುವರೆಸಿದ ಆತನ ಬುರಡೆ.
ನನ್ನ ೮ ವರ್ಷದ ಮಗಳನ್ನು ಬಿಟ್ಟರೂ ಇದಕ್ಕಿಂತ ನಂಬುವ ಹಾಗಿನ ಕಥೆ ಚೆನ್ನಾಗಿ ಕಟ್ಟುತ್ತಾಳೆ. ಇದನ್ನು ಕೇಳಿ ಚಪ್ಪಾಳೆ ಹೊಡೆದ ಜನರ ಮುಖ ವಿಡಿಯೋದಲ್ಲಿ ಕಾಣಿಸಲಿಲ್ಲ. ಕಂಡಿದ್ದರೆ ಒಮ್ಮೆ ನೋಡಬಹುದಿತ್ತು. ಊರಲ್ಲೇ ಇದ್ದಿದ್ದರೆ ಈ ಕಥೆಗಳು ಸುಂದರವಾಗಿ, ನಂಬಿಕಾರ್ಹವಾಗಿ ಕಾಣುತ್ತಿದ್ದವೋ ಏನೋ, ಆದರೆ ಹೊರಪ್ರಪಂಚ ಗೊತ್ತಿದ್ದೂ ಈ ವಿಡಿಯೋ ಮುಂದೆ ನೋಡಲಾಗಲಿಲ್ಲ. ಆಶ್ಚರ್ಯ ಎಂದರೆ ಆತನಿಗೆ ಪಬ್ಲಿಸಿಟಿ ಕೊಟ್ಟ ಮೀಡಿಯಾಗಳು ಒಮ್ಮೆಯಾದರೂ ಸತ್ಯ ಅಸತ್ಯ ತಿಳಿಯುವ ಪ್ರಯತ್ನ ಮಾಡಿದರೇ ? ಆತ ಭಾಷಣ ಮಾಡುವುದನ್ನು ಕೇಳಿದ ಜನರಲ್ಲಿ ಒಬ್ಬರು, ಕನಿಷ್ಠ ಒಬ್ಬರು ಮುಂದೆ ಹೋಗಿ ಪಕ್ಕಕ್ಕೆ ಕರೆದು “ಇಷ್ಟೊಂದು ಸುಳ್ಳು ಹೇಳಬೇಡ. ಹೇಳುವುದಾದರೂ ನಂಬುವಂತೆ ಹೇಳು. ಇದು ಸ್ವಲ್ಪ ಜಾಸ್ತಿ ಆಯಿತು ” ಎಂದು ಹೇಳುವ ಧೈರ್ಯ ಮಾಡಿದರೇ ?
ಇಲ್ಲಾ. ನಮಗೆ ಇಂತಹ ಸುಳ್ಳು ಚಮತ್ಕಾರಿಕ ಕಥೆಗಳೇ ಇಷ್ಟ. ಒಂದೇ ದಿನದಲ್ಲಿ ಒಬ್ಬರನ್ನು ಒಳ್ಳೆಯ ರೀತಿಯಲ್ಲಿ ಫೇಮಸ್ ಮಾಡೋಕೂ ಗೊತ್ತು. ಪಟ್ಟದಿಂದ ಕೆಳಗಿಳಿಸಿ ಚರಂಡಿಗೆ ಬೀಳಿಸಲೂ ಗೊತ್ತು. ಅದನ್ನೇ ಎಂಜಾಯ್ ಮಾಡುತ್ತೇವೆ. ಆತ ಹೇಳಿದ್ದೇ ಹೇಳಿದ್ದು, ಜನ ಚಪ್ಪಾಳೆ ತಟ್ಟಿದ್ದೇ ತಟ್ಟಿದ್ದು.
ಇಂಟರ್ನೆಟ್ ದೊರೆಯಲು ಶುರುವಾದ ಮೇಲೆ ವಿಧ್ಯೆ ಸುಲಭವಾಗಿ ಕೈ ಬೆರಳುಗಳ ತುದಿಯಲ್ಲಿ ದೊರೆಯಲು ಶುರುವಾಗಿದ್ದು ಸತ್ಯ. ಅದನ್ನು ಉಪಯೋಗಿಸಿಕೊಂಡು ತಮ್ಮ ಬುದ್ಧಿಶಕ್ತಿ ವೃದ್ಧಿಸಿಕೊಂಡು ಬೆಳೆದವರೂ ಹಲವರು. ಆದರೆ ಇದೇ ಇಂಟರ್ನೆಟ್ ಸೋಶಿಯಲ್ ಮೀಡಿಯಾ ಮುಖಾಂತರ “ವೈರಲ್” ಎನ್ನುವ ಒಂದು ವಿಧಾನ ದೊರಕಿಸಿಕೊಟ್ಟಿತು. ಮೊದಲೆಲ್ಲಾ ಯಾರೋ ಬೇಕೆಂದು ಯೋಚಿಸದೆ ತೆಗೆದ ವಿಡಿಯೋ ಅಥವಾ ಆಡಿಯೋ ಒಬ್ಬರಿಂದ ಒಬ್ಬರಿಗೆ ಹಬ್ಬಿ ಫೇಮಸ್ ಆಗತೊಡಗಿದಾಗ, ವೈರಲ್ ಆಗಬೇಕೆಂದೇ ವಿಡಿಯೋ ತಯಾರಿಸುವ ಮನಸ್ಥಿತಿ ಶುರುವಾಯಿತು. ಜೊತೆಗೆ youtube ಇನ್ನಿತರ ಚಾನೆಲ್ಗಳ ಮುಖಾಂತರ ದುಡಿಮೆಯ ದಾರಿಯೂ ಕೂಡ.
ಮಕ್ಕಳಿಗೆ ಹೋಗಲಿ ದೊಡ್ಡವರಲ್ಲೇ ಎಷ್ಟು ಜನರಿಗೆ ತಾವೇನಾದರೂ ಪೋಸ್ಟ್ ಮಾಡಿದಾಗ ಎಷ್ಟು ಜನ ಲೈಕ್ ಕೊಟ್ಟರು ಎಂಬ ಕುತೂಹಲ, ಜಾಸ್ತಿ ಲೈಕ್ ಬಂದಾಗ ಹೆಮ್ಮೆ, ಕಡಿಮೆ ಬಂದಾಗ ಬೇಸರ ಆಗುವುದಿಲ್ಲ? ದೊಡ್ಡವರಿಗೆ ಬುದ್ದಿ ಇದೆ ಅಂದುಕೊಳ್ಳೋಣ. ಮಕ್ಕಳಿಗೆ? ನನ್ನ ಎರಡನೇ ಮಗಳು ೯ನೇ ಕ್ಲಾಸ್. ಟೈಮ್ ಟೇಬಲ್ ಇಂದ ಹಿಡಿದು ಶಾಲೆಯ ಹೆಚ್ಚಿನ ವಿಚಾರ ವಿನಿಮಯ ಆಗುವುದು ಇಂಟರ್ನೆಟ್ ಮೂಲಕವೇ. ಆದಷ್ಟು ದಿನ ಹಳೆಯ ನೋಕಿಯಾ ಫೋನಿನಲ್ಲಿ ಕಳೆದಿದ್ದಾಯ್ತು. ಅದು ಸಾಕಾಗದ ಸ್ಥಿತಿ ಬಂದಾಗ ಸ್ಮಾರ್ಟ್ ಫೋನ್ ಬಂದಿತು. ಬಂದಿದ್ದೇನೋ ಓದಲು, ಗ್ರೂಪ್ ಪ್ರಾಜೆಕ್ಟ್ ವರ್ಕ್ ಮಾಡಲು ಅನುಕೂಲವಾಗಲಿ ಎಂದು. ಆದರೆ ಅದರ ಜೊತೆ ಇನ್ಸ್ಟಾಗ್ರಾಮ್, ಸ್ನ್ಯಾಪ್ ಚಾಟ್, ಟಿಕ್ ಟಾಕ್ ಬರುತ್ತದೆ ಎಂದು ಯೋಚಿಸಿರಲಿಲ್ಲ.
ಪರವಾಗಿಲ್ಲ. ಅವುಗಳಲ್ಲೂ ಕಲಿಯಲು ಹಲವಷ್ಟು ಸಿಗುತ್ತದೆ ಎಂದು ಸಮಾಧಾನ ಪಟ್ಟುಕೊಂಡರೆ ಆ ಸಮಾಧಾನ ಸ್ವಲ್ಪ ದಿನಗಳದ್ದು ಮಾತ್ರ. ಇನ್ಸ್ಟಾಗ್ರಾಮ್ ನಲ್ಲಿ ಪರ್ಸನಲ್ ಫೋಟೋಸ್ ಹಾಕಲಿಕ್ಕಿಲ್ಲ ಎಂಬ ಷರತ್ತುಗಳು ಇದ್ದಿದ್ದು ಸರಿಯೇ. ಆದರೆ ಉಳಿದ ಗೆಳತಿಯರು ತಮ್ಮ ತಮ್ಮ ಫೋಟೋಸ್ ಹಾಕಿಕೊಂಡಾಗ “ನಮ್ಮ ಮನೆಯಲ್ಲಿ ಮಾತ್ರ ಹೀಗೆ ಏಕೆ?” ಎಂಬ ಪ್ರಶ್ನೆ. ತಮ್ಮ ಫೋಟೋ ಹಾಕಿ ಪ್ರಯೋಜನ ಏನು ಎಂಬ ಚರ್ಚೆಗೆ ಎಳೆದಾಗ, ಇನ್ನೇನೂ ಹಾಕಿ ಯಾರೂ ಲೈಕ್ ಬರಲಿಲ್ಲ ಎಂಬ ಖಿನ್ನತೆ. ಲೈಕ್ ಮಾಡುವುದರಲ್ಲಿಯೇ ಗ್ಯಾಂಗ್ಸ್ . mobbing … ಅರ್ಥ ಮಾಡಿಸುವಷ್ಟರಲ್ಲಿ ಅಪ್ಪ ಅಮ್ಮನ ಶಕ್ತಿ ಕಾಲಿ. ಇದು ಫಾರಿನ್ ಸ್ಥಿತಿ ಎಂದುಕೊಂಡರೆ ಸಾರೀ . ಇಂದಷ್ಟೇ ಮಗಳು ಊರಲ್ಲಿ ಯಾರ್ಯಾರು ಆಕೆಯನ್ನು ಫಾಲೋ ಮಾಡುತ್ತಿದ್ದಾರೆ ಎಂದು ಹೆಸರು ಹೇಳುತ್ತಿದ್ದರೆ ನನಗೆ ಆಶ್ಚರ್ಯ. ಯಾಕೆಂದರೆ ಅವರ ಹತ್ತಿರ ಇನ್ಸ್ಟಾಗ್ರಾಮ್ ಅಕೌಂಟ್ ಇದೆ ಎಂದೂ ನಾನು ಯೋಚಿಸಿರಲಿಲ್ಲ. “ಏನಿದು ? ಇಂಟರ್ನೆಟ್ ನಿಮಗೆ ಮಾತ್ರಾನಾ?” ಕೇಳಬೇಡಿ. ನನ್ನಂತೆಯೇ ಅವರ ತಂದೆತಾಯಿಯರು ಇದ್ದಿದ್ದರೆ ನಾನು ಹೀಗೆ ಯೋಚಿಸುತ್ತಿರಲಿಲ್ಲ. ತಂದೆ ತಾಯಿಯರಿಗೆ ನಮ್ಮ ಮಕ್ಕಳು ಏನಿದ್ದರೂ ಭಾರತೀಯ ಪದ್ದತಿಯಂತೆ ಕಲಿಯಬೇಕು. ಗ್ಯಾಡ್ಜೆಟ್ಸ್ ಬೇಡ ಎನ್ನುವ ಮನಸ್ಥಿತಿ ಇದ್ದೂ ಮಕ್ಕಳ ಅಕೌಂಟ್ಸ್ ಕಾಣಿಸಿದಾಗ ನನಗಾದ ಆಶ್ಚರ್ಯ ಸರಿ ತಾನೇ?
ಅಲ್ಲೇ ನಿಲ್ಲಲಿಲ್ಲ ಮಗಳ ಪೈಪೋಟಿ. ಆಕೆಗೆ ೧೨೬ followers ನನಗೆ ೧೩೭, ಹೇಳಿದಾಗ ಕೈಲಿದ್ದ ಸೌಟಿನಿಂದ ತಲೆಗೆ ಕುಟ್ಟಬೇಕು ಎನಿಸಿದ್ದು ಸಹಜ. ಕುಟ್ಟಲಿಲ್ಲ. “followers ಇದ್ದರೆ ಏನು ಸಾಧಿಸಿದಂತೆ?” ಪ್ರಶ್ನಿಸಿದೆ. “ಫೇಮಸ್” ಎಂದು ಅರ್ಥ ಎಂದಳು. ಮತ್ತೊಂದು ಗಂಟೆ ನಮ್ಮ ಚರ್ಚೆ ಮುಂದುವರೆಯಿತು. ಈ ರೀತಿ ಫೇಮಸ್ ಆಗಿ ಸಾಧಿಸುವುದು ಶೂನ್ಯ ಎಂದು ಅರ್ಥ ಮಾಡಿಸಲು ನಾನು ಶಕ್ಯಳಾಗಿದ್ದೇನೆ ಎಂಬ ನಂಬಿಕೆ ನನಗಿಲ್ಲ. ಯಾಕೆಂದರೆ ಸುತ್ತ ಮುತ್ತಲಿನ ಪ್ರಪಂಚ ಬೇರೆಯೇ ರೀತಿ ಇದ್ದಾಗ ಅಪ್ಪ ಅಮ್ಮ ಹೇಳುವುದು “ಅವರಿಗೆ ಗೊತ್ತಿಲ್ಲ” ಎಂದಷ್ಟೇ ಮಕ್ಕಳಿಗೆ ಅರ್ಥವಾಗುವುದು.
ನನ್ನ ಮಕ್ಕಳ ಪರಿಚಯವಿರುವವರಿಂದ ಹಲವು ಬಾರಿ ಬೈಸಿಕೊಂಡಿದ್ದೇನೆ. “ಒಳ್ಳೆಯ ಮಕ್ಕಳು. ಟ್ಯಾಲೆಂಟೆಡ್ ಇದ್ದಾರೆ. ಆಗಾಗ ಹೊಗಳಬೇಕು. ಬೈಬೇಡ” ಎಂದು. ಆದರೆ ಸತ್ಯ ಹೇಳುತ್ತೇನೆ. ಅವು ಏನೇ ಮಾಡಿದರೂ ನನಗೆ ನಿಜವಾದ ಸಂತೋಷ ಸಿಗುವುದು ಅವು ನಿಜವಾದ ಪ್ರಯತ್ನ ಮಾಡಿ ಏನೋ ಸಾಧಿಸಿದಾಗ ಮಾತ್ರ. ಎಷ್ಟೋ ಸಾರಿ ಚೆಸ್ ಕಾಂಪಿಟಿಷನ್ಗೆ ಹೋದಾಗ ಸೋತ ದಿನ ಸಂತೋಷವಾಗಿದ್ದಿದೆ. ೨ ಗಂಟೆ ಚಾಲೆಂಜ್ ಕೊಟ್ಟು ಎದುರಾಳಿಯ ಎದುರಿಗೆ ಕುಳಿತು ಕಾನ್ಸನ್ಟ್ರೇಟ್ ಮಾಡಿ ಆಟ ಆಡಿ ಸೋತಾಗ ಸಿಗುವ ಆತ್ಮ ಸಂತೋಷ ಯಾರೋ ವೀಕ್ ಇರುವ ಎದುರಾಳಿಯೊಂದಿಗೆ ೧೦ ನಿಮಿಷದ ಆಟವಾಡಿ ಟ್ರೋಫಿ ಗೆದ್ದಾಗ ಸಿಕ್ಕಿಲ್ಲ. ಅದನ್ನು ಮಕ್ಕಳಿಗೆ ವಿವರಿಸಿದ್ದೇನೆ ಕೂಡ. ಆದರೂ ಅವುಗಳ ಮನಸ್ಸು ಬೇರೆ ರೀತಿಯಲ್ಲಿ ಚಲಿಸುತ್ತವೆ. ಕಾಂಪಿಟಿಶನ್ ಗೆ ಹೋದಾಗ ಮೊದಲು ಕಣ್ಣು ಹೋಗುವುದು ಎಷ್ಟು ದೊಡ್ಡ ಟ್ರೋಫಿ ಇಟ್ಟಿದ್ದಾರೆ ಎಂದು. ಆದಷ್ಟು ವೀಕ್ ಇರುವ ಎದುರಾಳಿ ಸಿಗಲಿ ಎಂದು. ಅಲ್ಲೂ ತಿದ್ದಲು ಪ್ರಯತ್ನಿಸುತ್ತೇವೆ. “ಆಟದ ಕಡೆ ಗಮನ ಕೊಡು. ಒಳ್ಳೆಯ ಎದುರಾಳಿಯ ಎದುರು ಸರಿಯಾದ ಆಟ ಆದಿ ಸೋತರೂ ಅದು ನಿಜವಾಗಿ ಗೆದ್ದಂತೆ. ಟ್ರೋಫಿ ಇಂಪಾರ್ಟೆಂಟ್ ಅಲ್ಲ.” ಹಾಗೆಂದು ಅವರ ಅಭಿವೃದ್ಧಿ ನೋಡಿ ಸಂತೋಷ ಪಡುವುದಿಲ್ಲವೇ? ಖಂಡಿತಾ ಸಂತೋಷ ಪಡುತ್ತೇನೆ. ಹೆಮ್ಮೆಯೂ ಆಗುತ್ತದೆ. ಆದರೆ ಮಾಡಿರುವ ಕೆಲಸದ ಹಿಂದೆ ನಿಜವಾದ ಪರಿಶ್ರಮ ಇದ್ದಾಗ ಮಾತ್ರ. ಟ್ಯಾಲೆಂಟ್ ಗಿಂತ ಪರಿಶ್ರಮ ಮುಖ್ಯ ಎಂದು ಮಾತ್ರ ಆಗಾಗ ಎಚ್ಚರಿಸುತ್ತಿರುತ್ತೇವೆ.
ಶಾಲೆಯಲ್ಲಿದ್ದಾಗ ರನ್ನಿಂಗ್ ರೇಸ್ ಇರುತ್ತಿತ್ತು. ಯಾರೋ ಕೆಲವರು ಮೊದಲ ಮೂರು ಸ್ಥಾನ ಪಡೆದುಕೊಳ್ಳುತ್ತಿದ್ದರು. ಆ ಒಂದು ಟ್ರೋಪಿಗಾಗಿ ಶಾಲೆ ಶಾಲೆಯ ಟೀಚರ್ ಗಳ ಮಧ್ಯೆ ಜಗಳವಾಗಿದ್ದಿದೆ. ನಮ್ಮ ಶಾಲೆಗೇ ಹೆಸರು ಬರಬೇಕು ಎಂದು ಕೆಲವರು ಮೋಸ ಮಾಡಿದ್ದೂ ಇದೆ. ಆದರೆ ಆ ಓಡುವ ಟ್ಯಾಲೆಂಟ್ ಇಂದ ಪ್ರಯೋಜನ ಏನು? ಈಗಿನಂತೆ ಬೇಕಾದಷ್ಟು ವೆಹಿಕಲ್ಸ್ ಇಲ್ಲದೆ ಇದ್ದು ಏನಾದರೂ ಅತ್ಯಗತ್ಯ ವಸ್ತುವನ್ನು ಇನ್ನೆಲ್ಲಿಗೋ ಮುಟ್ಟಿಸುವುದಕ್ಕೋ ಏನಕ್ಕೂ ಬೇಕಾದಾಗ ಇಂತಹವರ ಪ್ರಯೋಜನ ಅಲ್ಲವೇ? ಹೀಗೆ ಯೋಚಿಸುತ್ತಾ ಹೋದರೆ ಪ್ರತಿಯೊಂದು ಟ್ಯಾಲೆಂಟ್ ಸಹ ಒಂದಲ್ಲಾ ಒಂದು ರೀತಿ ನೆರವಾಗಬಹುದು. ಆದರೆ ಮೋಸ ಮಾಡಿ ಮುಂದೆ ಹೋದರೆ? ಅರ್ಹತೆ ಇಲ್ಲದೆ ಮುಂದೆ ಹೋದರೆ? ಯೋಚಿಸೋಣ, ನಾವು ಆಟದ ಮೈದಾನದಲ್ಲಿದ್ದೇವೆ. ಯಾರಿಗೋ ಹಾರ್ಟ್ ಪ್ರಾಬ್ಲಮ್. ಅಗತ್ಯ ಟ್ಯಾಬ್ಲೆಟ್ ಬೇಕು ಎಂದುಕೊಳ್ಳೋಣ. ನಾವು ಗೆಲ್ಲಿಸ ಹೋರಟ ನಮ್ಮ ಶಾಲೆಯ ಮಗುವನ್ನು ಟ್ಯಾಬ್ಲೆಟ್ ತರಲು ಓಡಿಸಿ ಕಳಿಸುತ್ತೇವೆಯೇ ? ಅಥವಾ ನಮ್ಮ ಮಗುವಿಗಿಂತ ಹೆಚ್ಚು ವೇಗವಾಗಿ ಓಡುವ ಶಕ್ತಿಯಿರುವ ಎದುರು ಶಾಲೆಯ ಮಗುವನ್ನು ಕಳಿಸುವಂತೆ ರಿಕ್ವೆಸ್ಟ್ ಮಾಡುತ್ತೇವೆಯೇ? ೩೫ ಮಾರ್ಕ್ಸ್ ತೆಗೆದುಕೊಂಡು ಅಥವಾ ದುಡ್ಡು ಕೊಟ್ಟು ಡಾಕ್ಟರ್ ಆದವರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಇಚ್ಚಿಸುತ್ತೇವೆಯೇ? ಅಥವಾ ನಿಜವಾದ ಅರ್ಹತೆಯುಳ್ಳ ಡಾಕ್ಟರ್ನಿಂದಲೇ? ಟ್ಯಾಲೆಂಟಿನ ಉಪಯೋಗ ಯೋಚಿಸುವಾಗ ಅರ್ಹತೆ ಮುಖ್ಯ . ನಮ್ಮ ಎನ್ನುವುದು ಗೌಣ ಎನ್ನಿಸುವುದಿಲ್ಲವೇ?
ಫುಟ್ಬಾಲ್ ಕೋಚ್ john wooden ಪ್ರಕಾರ success ಎಂದರೆ “ನಮ್ಮ ೧೦೦% ಪ್ರಯತ್ನ ಮಾಡಿ ನಮ್ಮ ಬೆಸ್ಟ್ ಸಾಧಿಸಿದ ಸಮಾಧಾನದ ಅನುಭವ” ಅವರ wooden on leadership ಪುಸ್ತಕದಿಂದ ಬರೀ ಮಕ್ಕಳಿಗೆ ಹೇಳಿಕೊಡಲು ಅಲ್ಲ, ನಮ್ಮ ಜೀವನಗಳಿಗೇ ಅನ್ವಯಿಸುವ ನೀತಿಗಳನ್ನು ಕಲಿತದ್ದು ಹಲವು. ಆದರೆ ಅವರ ಈ “ಸಕ್ಸಸ್” ನ ಡೆಫಿನಿಶನ್ ತುಂಬಾ ಇಷ್ಟವಾಯಿತು. ಮಕ್ಕಳಿಗೆ ಅದರ ಮೂಲ್ಯ ತಿಳಿಸುವ ಶತಪ್ರಯತ್ನ ಮಾಡುತ್ತಿದ್ದೇನೆ. ಸುತ್ತ ಮುತ್ತಲಿನವರು ಏನೇ ಹೇಳಲಿ, ಎಷ್ಟೇ ಹೊಗಳಲಿ ನನ್ನ ಕಣ್ಣಲ್ಲಿ ಮಕ್ಕಳ ಯಶಸ್ಸಿನಿಂದ ಬರುವ ಹೊಳಪು ಮಾತ್ರ ಅವರ “ಪ್ರಯತ್ನ” ದ ಮೇಲೆ ಅನ್ವಯವಾಗಿರುತ್ತದೆ. ಇದೇನೂ ನಾನು ಕಂಡುಕೊಂಡ ಹೊಸ ದಾರಿಯಲ್ಲ. ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರು ನೆಡೆದುಕೊಂಡಿದ್ದೂ ಹೀಗೆಯೇ.
ಅನಿಸಿದ್ದಿಷ್ಟೇ. ಆ ಹುಡುಗ ಒಂದರ ಮೇಲೊಂದಂತೆ ಸುಳ್ಳು ಹೇಳುತ್ತಲೇ ಹೋದ. ನಮ್ಮ ಮೀಡಿಯಾ ಅದನ್ನು ಸುದ್ದಿ ಮಾಡಿ ಆತನನ್ನು ಏರಿಸುತ್ತಲೇ ಹೋಯಿತು. ಜನ ಜೈ ಜೈ ಎಂದರು. ಬಿದ್ದಾಗ ನಕ್ಕರು. ಹಾಗಿದ್ದರೆ ನಮ್ಮ ಸಮಾಜದ ನೈತಿಕತೆ ಎಲ್ಲಿದೆ? ಸಾಮಾನ್ಯ ಜನ ಹೋಗಲಿ, fact ಚೆಕ್ ಮಾಡಲು ಬರುತ್ತದೆಯೋ ಇಲ್ಲವೋ. ಅಟ್ ಲೀಸ್ಟ್ ಮೀಡಿಯಾದವರು?
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020