ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಆತ್ಮನಿರ್ಭರತೆಯ ಬಗ್ಗೆ ಮಾತನಾಡಿದ್ದು ಆತ್ಮಾವಲೋಕನಕ್ಕೆ ಮನಸ್ಸನ್ನು ಪ್ರೇರೇಪಿಸಿತು.
ಅನಿವಾಸಿ ಭಾರತೀಯರಂತೆ ನಾವು ದೇಶ ಬಿಟ್ಟು ಹೋಗಲಿಲ್ಲ ಸತ್ಯ. ಆದರೆ ಇದ್ದಲ್ಲೇ ಇದ್ದು ನಮ್ಮ, ನಮ್ಮ ಮನೆಯವರ ಹೊಟ್ಟೆ ಹೊರೆಯುವುದನ್ನು ಬಿಟ್ಟು ದೇಶಕ್ಕಾಗಿ ನಾವೇನು ಮಾಡಿದ್ದೇವೆ? ನಾವು ಹೊಟ್ಟೆ ಹೊರೆಯಲು ಮಾಡಿದ ಕೆಲಸದ ಮೂಲಕವೇ ದೇಶಕ್ಕೆ ಸೇವೆ ಸಲ್ಲಿಸಿದ್ದೇವೆ ಎಂದು ಸಮರ್ಥಿಸಿಕೊಳ್ಳತೊಡಗಿದರೆ, ಅನಿವಾಸಿ ಭಾರತೀಯರೂ ಹೊರದೇಶದಲ್ಲಿ ತಮ್ಮ ಹೊಟ್ಟೆ ಹೊರೆಯಲು ಮಾಡಿದ ಕೆಲಸದ ಮೂಲಕ ಅದೆಷ್ಟೋ ತಂತ್ರಜ್ಞಾನಗಳು ಭಾರತಕ್ಕೆ ಬಂದಿವೆ. ಈಗ ನಾವು ನಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಉಪಯೋಗಿಸುವ ಫೇಸ್ಬುಕ್ , ವಾಟ್ಸಪ್ಪ್, ಗೂಗಲ್ ಕೂಡ ನಮ್ಮದಲ್ಲ. ಆಮದಾಗಿದ್ದೇ. ನಾವು ಉಪಯೋಗಿಸುವ ಅದೆಷ್ಟೋ ವೈದ್ಯಕೀಯ ಪರಿಕರಗಳು ಪರಕೀಯವೇ. ಪರಕೀಯ ಎಂದುಕೊಂಡರೆ ಪರಕೀಯ. ವಿಶ್ವಮಾನವನಂತೆ ಯೋಚಿಸಿ, ಎಲ್ಲರೂ ನಮ್ಮವರು ಎಂದುಕೊಂಡರೆ ಎಲ್ಲವೂ ನಮ್ಮದಾಗುತ್ತದೆ.
ಇಷ್ಟಾಗಿಯೂ, ಊರು ಊರುಗಳ ಮಧ್ಯೆ, ರಾಜ್ಯ ರಾಜ್ಯಗಳ ಮಧ್ಯೆ, ದೇಶ ದೇಶಗಳ ಮಧ್ಯೆ ಈ ಗೆರೆಗಳನ್ನು ಎಳೆದವರು ಯಾರು? ಭೂತಾಯಿಯೇ? ದೇವರೇ? ಮನುಷ್ಯನ ಸ್ವಾರ್ಥವೇ? ನನ್ನ ಎಂಬುದನ್ನು ವಿಸ್ತರಿಸುತ್ತಾ ಹೋದಂತೆ ವಿಶಾಲವಾಗುತ್ತಾ ಹೋಗುತ್ತದೆ. ಹಾಗೆಯೇ, ಸಂಕುಚಿಸುತ್ತಾ ಹೋದಂತೆ ಕೊನೆಗೆ ನಿಲ್ಲುವುದು ದೇಶ ಬಾಂಧವರನ್ನು ಬಿಟ್ಟು ಬರೀ “ನನ್ನ” ಸುತ್ತಲೇ ಅಲ್ಲವೇ? ಇದು ಸ್ವಾರ್ಥ ಅಲ್ಲದೆ ಇನ್ನೇನು ?
ಊರು ಬಿಟ್ಟು ಪಟ್ಟಣಕ್ಕೆ ಹೋದವರಿಗೆ ಮನೆ ಎಂದರೆ ನೆನಪು ಬರುವುದು ಬರೀ ಮನೆಯಲ್ಲ. ಇಡೀ ಊರೇ. ಪಟ್ಟಣ ಬಿಟ್ಟು ಬೇರೆ ರಾಜ್ಯಕ್ಕೆ ಹೋದವರಿಗೆ ಮನೆಯೆನಿಸುವುದು, ನಮ್ಮದೆನಿಸುವುದು ಬರೀ ಊರಲ್ಲ, ನಮ್ಮ ರಾಜ್ಯ. ನಮ್ಮ ಭಾಷೆ. ಹಾಗೆಯೇ, ದೇಶ ಬಿಟ್ಟು ಹೋದವರಿಗೆ ಇಡೀ ಭಾರತವೇ ಮನೆಯೆನಿಸುತ್ತದೆ, ತಮ್ಮದೆನಿಸುತ್ತದೆ. ಹಾಗೆಯೇ ಭೂಮಿ ಬಿಟ್ಟು ಅಂತರಿಕ್ಷಕ್ಕೆ ಹೋದ ಎಷ್ಟೋ ವಿಜ್ಞಾನಿಗಳು ಇಡೀ ಭೂಮಿಯ ಮೇಲೆ ಯಾವ ಗೆರೆಯನ್ನೂ ಕಾಣದೆ, ಭೂಮಿಯೇ ನಮ್ಮದೆನ್ನುವುದನ್ನೂ ನೋಡಿದ್ದೇವೆ. ಅಂತಹದರಲ್ಲಿ ನಮ್ಮದೆಂಥ ಸ್ವಾರ್ಥ?
ನಮ್ಮಲ್ಲಿ ಎಷ್ಟೋ ಜನ ತಮ್ಮ ಶಕ್ತಿ ಮೀರಿ ಲಾಕ್ ಔಟ್ ಮೊದಲ ದಿನದಿಂದ ಕಷ್ಟದಲ್ಲಿ ಇರುವವರಿಗೆ, ದಿನಗೂಲಿ ಮಾಡುವ ಜನರಿಗೆ ಅನ್ನದಾನ ಮಾಡುವ ಕಾರ್ಯ ಮಾಡಿದ್ದಾರೆ. ತಮ್ಮ ಊರುಗಳಲ್ಲಿ ಶೌಚ ಕಾಪಾಡಿಕೊಳ್ಳುವ ಕೆಲಸ ಮಾಡಿದ್ದಾರೆ. ವೈದ್ಯಕೀಯ ಹಾಗೂ ಇತರೆ ಸರ್ಕಾರಿ ನೌಕರರು ದಿನ ರಾತ್ರಿಯೆನ್ನದೆ ಅವಿರತ ಕೆಲಸ ಮಾಡಿದ್ದಾರೆ. ಅವರ್ಯಾರೂ ಅನಿವಾಸಿ ಭಾರತೀಯರನ್ನು ಅಥವಾ “ವಲಸೆ ಕಾರ್ಮಿಕರನ್ನು” ಹೀಯಾಳಿಸುವ ಪ್ರಯತ್ನ ಮಾಡಲಿಲ್ಲ. ಅದರ ಬದಲು, ಅವರನ್ನೂ ತಮ್ಮ ಕಾರ್ಯದಲ್ಲಿ ಕೈಗೂಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನಾವೆಲ್ಲಾ ಒಂದು ಎನ್ನುವ ಭಾವನೆ ತೋರಿಸಿದ್ದಾರೆ. ಹಾಗೆಯೇ ಭಾರತೀಯರೂ, ಅನಿವಾಸಿ ಭಾರತೀಯರೂ ಪಿಎಂ ಕೇರ್ ಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಜೊತೆಗಿದ್ದೇವೆ ಎನ್ನುವ ಭಾವನೆ ಎಲ್ಲಾ ಕಡೆಯಿಂದ ವ್ಯಕ್ತವಾಗಿವೆ.
ಆದರೆ ದುರದೃಷ್ಟವೆಂದರೆ ಈ ರೀತಿ ಕಾರ್ಯದಲ್ಲಿ ತೊಡಗುವವರ ಸಂಖ್ಯೆಗಿಂತ ಫೇಸ್ಬುಕ್ ಜ್ಞಾನಿಗಳ, ಪ್ರೊಫೆಸರುಗಳ ಸಂಖ್ಯೆ ಜಾಸ್ತಿಯಾಗಿದೆ. ಹೊಟ್ಟೆಯಲ್ಲಿ ಹುಳಿ ತುಂಬಿಕೊಂಡಿರುವವರ ಸಂಖ್ಯೆ ಜಾಸ್ತಿಯಿದೆ. ಇಂತಹವರು ತಮ್ಮ ಕಲ್ಪನೆಗಳ, ಬರಹಗಳ ಮೂಲಕ ಭಾರತೀಯರಲ್ಲಿ ಅನಿವಾಸಿ ಭಾರತೀಯರ ಹಾಗೂ ವಲಸೆ ಕಾರ್ಮಿಕರ ಬಗ್ಗೆಯೂ, ಅನಿವಾಸಿ ಭಾರತೀಯರಲ್ಲಿ ಭಾರತೀಯರ ಬಗ್ಗೆಯೂ ಮನಸ್ಸುಗಳಲ್ಲಿ ವಿಷ ತುಂಬಿ , ಅವರ ಉತ್ತಮ ಭಾವನೆಗಳನ್ನು , ಪ್ರೀತಿಯನ್ನು , ಬಾಂಧವ್ಯವನ್ನು ಕೊಲ್ಲುತ್ತಾರೇನೋ ಎನ್ನುವ ಸಂಶಯ ಕಾಡುತ್ತಿದೆ. ಆ ಕ್ಷಣದಲ್ಲಿ ಕಾಣುವ ಯಾವುದೊ ಮೂರಿಂಚು ಸತ್ಯವನ್ನು ಸಂಪೂರ್ಣ ಸತ್ಯ ಎಂದು ತಿಳಿದುಕೊಂಡು ಸಾರಲು ಪ್ರಯತ್ನ ಪಡುವುದು ಸರಿಯೇ?
ಅನಿವಾಸಿ ಭಾರತೀಯರಿಗೆ ದೇಶ ಬಿಟ್ಟು ಹೊರಹೋಗಲು ಹೇಗೆ ಹಲವಾರು ಕಾರಣಗಳು ಇವೆಯೋ, ಇಲ್ಲೇ ಉಳಿದವರಿಗೆ ಇಲ್ಲೇ ಉಳಿಯಲು ಅದೆಷ್ಟು ಕಾರಣಗಳಿರಬಹುದು? ಯೋಚಿಸಿದ್ದೇವೆಯೇ?
ನಮ್ಮಲ್ಲಿ ಎಷ್ಟು ಜನ ಸ್ವ ಇಚ್ಛೆಯಿಂದ, ಬಂದ ಅವಕಾಶವನ್ನು ಬಿಟ್ಟು ಊರಲ್ಲಿಯೇ ಉಳಿದು ದೇಶಸೇವೆ ನಿರ್ಧಾರ ಮಾಡಿದ್ದಾರೆ? ಇಲ್ಲ ಅಂತಿಲ್ಲ. ಬೆರಳೆಣಿಕೆಯಷ್ಟು ಜನ ಮಾತ್ರ ಅಂತಹವರು ಸಿಗಬಹುದು. ಉಳಿದವರಲ್ಲಿ ಕೆಲವರಿಗೆ ಒಂದಾ ಅಪ್ಪ ಅಜ್ಜ ಮಾಡಿದ ಜಮೀನು ಆಸ್ತಿ ಬಿಡಲಾರದೆ ಹೋಗದಿರುವ ಪರಿಸ್ಥಿತಿ. ಇನ್ನು ಕೆಲವರಿಗೆ ಮನೆ ಬಿಟ್ಟು ಇದ್ದೇ, ತಮ್ಮ ಆಹಾರ ಅಭ್ಯಾಸಗಳನ್ನು ಬದಲಾಯಿಸಿಕೊಂಡೇ ಅಭ್ಯಾಸವಿರುವುದಿಲ್ಲ. ನಾಲ್ಕು ದಿನ ಎಲ್ಲಾದರೂ ಹೋದರೂ ಚಡಪಡಿಸುವ ಮನಸ್ಥಿತಿ. ಇನ್ನು ಕೆಲವರಿಗೆ ಓದಿನ ಕೊರತೆಯಿಂದಲೋ ಅಥವಾ ಇನ್ಯಾವುದೋ ಕೊರತೆಯಿಂದಲೋ ಹೊರಹೋಗಿ ಕೆಲಸ ದಕ್ಕಿಸಿಕೊಳ್ಳಲಾಗದ ಅಸಹಾಯಕತೆ. ಇಷ್ಟಕ್ಕೂ ನಮ್ಮಲ್ಲೆಷ್ಟು ಜನ ಹುಟ್ಟಿದ ಊರಲ್ಲಿಯೇ ಇದ್ದೇವೆ? ಸಣ್ಣ ಪುಟ್ಟ ಕೆಲಸವೆಂದಾದರೂ ಹತ್ತಿರದ ಚಿಕ್ಕ ಪಟ್ಟಣಕ್ಕೆ ಅವಕಾಶ ಹುಡುಕಿಕೊಂಡು ಹೋಗಿಲ್ಲವೇ? ಟ್ರಾನ್ಸ್ಫರ್ ಆಗುವ ಕೆಲಸಗಳನ್ನು ಹಿಡಿದು ಊರುಗಳನ್ನು, ರಾಜ್ಯಗಳನ್ನು ಸುತ್ತಲಿಲ್ಲವೇ? ಹಿಂದೊಮ್ಮೆ ಊರಿಂದ ಮುಂಬೈಯಿಗೆ ಹೋಗಲು ೨-೪ ದಿನ ಬೇಕಾಗುತ್ತಿತ್ತು. ಈಗ ೨ ಗಂಟೆ ಸಾಕಾಗುತ್ತದೆ. ಹಾಗೆಯೇ, ದೇಶ ದೇಶಗಳು ಹತ್ತಿರವಾಗಿ ಗ್ಲೋಬಲೈಸೇಶನ್ ಆಗಿದ್ದಲ್ಲವೇ? ನಾವು ಬೆಂಗಳೂರು, ಮುಂಬೈ, ದೆಲ್ಲಿ , ಮದ್ರಾಸ್ ಹೋದಂತೆ ಈಗಿನವರು ಹೊರದೇಶಕ್ಕೆ ಕೆಲಸಕ್ಕೆ ಹೋಗುವುದಲ್ಲವೇ?
ಮೊದಮೊದಲು ಅನಿವಾಸಿ ಭಾರತೀಯರನ್ನು ಕೊರೋನಾ ತಂದರೆಂದು ಬೈದೆವು. ಬರೀ ಭಾರತಕ್ಕೆ ಮಾತ್ರವಲ್ಲ. ವಿಶ್ವದ ಎಲ್ಲಾ ದೇಶಗಳಿಗೂ ಕೊರೋನಾ ಆಮದಾಗಿದ್ದೆಂದು ಮರೆತುಬಿಟ್ಟೆವು. ಅವು ಸಂಕಷ್ಟದಲ್ಲಿ ಇರುವುದನ್ನು ನೋಡಿ ನಮ್ಮ ಸಂಸ್ಕೃತಿ ಮೇಲೆಂದು ಹಿಗ್ಗಿದೆವು. ದಿನಗಳೆದಂತೆ ಬೆಂಗಳೂರು, ಮುಂಬೈ ಮುಂತಾದ ಪಟ್ಟಣಗಳೇ ಪರದೇಶದಂತೆ ಕಾಣಶುರುವಾಯಿತು. ಹಳ್ಳಿಗಳ ದಾರಿಗಳನ್ನು ಮುಚ್ಚಲು ಶುರು ಮಾಡಿದೆವು. ತಪ್ಪೇನಿಲ್ಲ. ಸರ್ಕಾರದ ಆದೇಶದ ಮೇಲೆ ತೆಗೆದುಕೊಂಡ ಯಾವುದೇ ಕ್ರಮಗಳೂ ತಪ್ಪಲ್ಲ. ಆದರೆ, ನಮ್ಮ ಮನಸ್ಸಿನ ಸ್ವಾರ್ಥ ಅಸೂಯೆಗಳನ್ನು ಬೇರೆಯವರನ್ನು ದೂಷಿಸಲು ಉಪಯೋಗಿಸುವುದು ಸರಿಯೇ?
ಪರಾವಲಂಬನೆ ಇಲ್ಲದೆ ಸಂಪೂರ್ಣವಾಗಿ ಸ್ವಾವಲಂಬನೆಯಿಂದ ಬದುಕುವುದು ಯಾವ ದೇಶಕ್ಕಾದರೂ ಸಾಧ್ಯವೇ? ನಾವು ದಿನನಿತ್ಯ ಉಪಯೋಗಿಸುವ ಉತ್ಪನ್ನಗಳನ್ನು ಒಮ್ಮೆ ಪರಿಶೀಲಿಸಿ ನೋಡಿಕೊಳ್ಳಬಹುದೇ?(ತೈಲೋತ್ಪನ್ನಗಳು, ಎಲೆಕ್ಟ್ರಿಕಲ್ ಯಂತ್ರೋಪಕರಣಗಳು, ರಾಸಾಯನಿಕ ವಸ್ತುಗಳು ಮುಂತಾದವು). ಹೊರದೇಶಗಳಿಂದ ಆಮದಾಗಿರುವ ಉತ್ಪನ್ನಗಳು, ತಂತ್ರಜ್ಞಾನಗಳು ಭಾರತಕ್ಕೆ, ಹಳ್ಳಿಗಳಿಗೆ ಬಂದಾಗ ಅವುಗಳನ್ನು ಉಪಯೋಗಿಸುವಾಗ ಈ ಸ್ವಾಭಿಮಾನ ಎಲ್ಲಿತ್ತು ? ಹೋಗಲಿ ಫ್ಲೈಟ್ ನಿಂತಮೇಲೂ, ಬಂದವರು ಕ್ವಾರಂಟೈನ್ ಆದ ಮೇಲೂ, ೩ ಲಾಕ್ ಡೌನ್ ಆದಮೇಲೂ ಕೊರೋನಾ ಹರಡುತ್ತಾ ಹೋಯಿತೇ ಹೊರತು, ನಮ್ಮ ಕೈ ಮುಗಿಯುವ ಸಂಸ್ಕೃತಿಗೆ ತಲೆಬಾಗಿ ನಿಲ್ಲಲಿಲ್ಲ. ಅನ್ನಿಸುವುದಿಷ್ಟೇ. ನಮ್ಮಲ್ಲಿ ಒಳ್ಳೆಯದು ಇದ್ದದ್ದನ್ನು ಹಂಚಿಕೊಳ್ಳೋಣ. ಆದರೆ, ನಮ್ಮದೊಂದೇ ಸರಿ. ಉಳಿದದ್ದೆಲ್ಲಾ ತಪ್ಪು ಎನ್ನುವ ಭಾವನೆಯನ್ನು “ಅಹಂಕಾರ”, “ಮೂಢತೆ” ಎಂದು ನಮ್ಮ ಪೂರ್ವಜರು ಕರೆದಿದ್ದಾರೆ. ನಮ್ಮಲ್ಲಿ ಎಷ್ಟು ಜನರಿಗೆ ಇರುವ ನಿಯಮಗಳನ್ನು ಪಾಲಿಸುವ ಬುದ್ಧಿಯಿದೆ? ಲಾಕ್ ಡೌನ್ ಎಂದ ಮೇಲೂ ಅದೆಷ್ಟು ಜನರು ಓಡಾಡಲು ಪ್ರಯತ್ನಿಸಿಲ್ಲ. ನಾಳೆಗೆ ಸಿಗುವುದಿಲ್ಲವೇನೋ ಎನ್ನುವಂತೆ ಸಾಮಗ್ರಿಗಳಿಗಾಗಿ ಅಂಗಡಿಗಳಿಗೆ ಮುಗಿಬಿದ್ದಿಲ್ಲ? ನಮ್ಮಲ್ಲೆಷ್ಟು ನ್ಯೂನ್ಯತೆಗಳಿವೆ? ಯೋಚಿಸಿದ್ದೇವೆಯೇ? ಸರಿಪಡಿಸಿಕೊಳ್ಳಲು ಪ್ರಯತ್ನಿಸಿದ್ದೇವೆಯೇ?
ಇಲ್ಲಾ, ಈ ಸಂದರ್ಭದಲ್ಲಿ ನಮ್ಮನ್ನು ನಾವು ಅವಲೋಕಿಸಿಕೊಳ್ಳುವ ಮೊದಲು ಪರರನ್ನು ದೂಷಿಸಬೇಕು. ಕಷ್ಟಪಟ್ಟು ಕೆಲಸ ಮಾಡುವ ವಲಸೆ ಕಾರ್ಮಿಕರನ್ನು ಊರು ಬಿಟ್ಟು ಪಟ್ಟಣಕ್ಕೆ ಹೋಗಿದ್ದೇಕೆ ಎಂದು ಹೀಗಳೆಯಬೇಕು. ಪರದೇಶಗಳ ಪದ್ದತಿಗಳನ್ನು ಬೈಯಬೇಕು. ಪರದೇಶಕ್ಕೆ ಹೋದವರನ್ನು ಬೈಯಬೇಕು. ಮನಸ್ಸಿನಲ್ಲಿ ಇರುವ ಸಿಟ್ಟು, ಅಸಹಾಯಕತೆ, ಕಿಚ್ಚು ಎಲ್ಲವನ್ನೂ ದೇಶಪ್ರೇಮದ ಸೋಗಿನಲ್ಲಿ ಪೊಟ್ಟಣ ಕಟ್ಟಿ ಹರಿಬಿಡಬೇಕು.
ಎಲ್ಲರೂ ಹುಟ್ಟಿದೂರಿನಲ್ಲಿಯೇ ಇದ್ದರೆ ಹಳ್ಳಿಗಳು ಹಳ್ಳಿಗಳಾಗಿಯೇ ಉಳಿಯುತ್ತಿದ್ದವೇ? ಇನ್ನೆಷ್ಟು ಅರಣ್ಯಗಳು ನಾಶವಾಗಿ ತೋಟ ಗದ್ದೆಗಳಾಗುತ್ತಿದ್ದವು ? ಈಗಾಗಲೇ ಅದೆಷ್ಟು ಹಳ್ಳಿಗಳು ಪಟ್ಟಣಗಳಂತೆ ಹಾಳಾಗಿವೆ? ಇನ್ನೆಷ್ಟು ಮನೆಗಳು, ಮನೆತನಗಳು ಆಸ್ತಿ ಪಾಸ್ತಿಗಾಗಿ ಜಗಳ ಮಾಡಿ ಕೋರ್ಟು ಅಳೆಯುತ್ತಿದ್ದವು? ಒಂದು ಮನೆಯಲ್ಲಿ ಸಂಸಾರ ಮೂರನೇ ಸಂತತಿಗೆ ಬರುವ ಹೊತ್ತಿಗೆ ಮನೆಯವರ ಸಂಖ್ಯೆ ೨ ರಿಂದ ಎಂಟಾಗಿ, ಎಂಟರಿಂದ ಹತ್ತಾಗಿ, ಅಜ್ಜ ಮಾಡಿದ ಎರಡೆಕರೆ ಜಾಗ ಸಾಕಾಗುತ್ತಿತ್ತೇ? ಹೊಸ ಹೊಸ ಟೆಕ್ನಾಲಜಿ ಬರದಿದ್ದರೆ ಎಲ್ಲರಿಗೂ ಉದ್ಯೋಗಾವಕಾಶಗಳೂ ಇರುತ್ತಿದ್ದವೇ? ಸುಧಾ ಮೂರ್ತಿ ಮಾಡುವ ಸಮಾಜ ಸೇವೆ ಬೇಕು. ಆದರೆ ಅದರ ಮೂಲವೂ ಆಮದಾದದ್ದೇ ಎನ್ನುವುದರ ನೆನಪಿದೆಯೇ?
ನಾವೆಣಿಸಿದಂತೆ ಬೇರಾವ ಸರ್ಕಾರಗಳೂ ಜನರನ್ನು ರಸ್ತೆಯಲ್ಲಿ ಸಾಯಲು ಬಿಡುತ್ತಿಲ್ಲ. ಎಲ್ಲರಿಗೂ ಶುಶ್ರೂಷೆ ನೀಡಲು ಅವರಿಂದಾದ ಪ್ರಯತ್ನ ಮಾಡುತ್ತಿದ್ದಾರೆ. ಮಾಧ್ಯಮದವರು ತೋರಿಸುವುದು ಬೇರೆಯೇ. ಓದಿಗಾಗಿಯೋ, ಪ್ರವಾಸಕ್ಕಾಗಿಯೋ ನಾಲ್ಕು ದಿನಕ್ಕೆಂದು ಹೋದವರು ಪರದೇಶದಲ್ಲಿ ಸಿಕ್ಕಿಹಾಕಿಕೊಂಡಾಗ ಪರಿತಪಿಸುವುದು ಸಹಜ. ಇಲ್ಲೇ ನಮ್ಮಲ್ಲೇ ಬೇರೆ ಊರಿನಲ್ಲಿ ಸಿಕ್ಕಿಹಾಕಿಕೊಂಡು, ಕೈಲಿರುವ ದುಡ್ಡು ಕಾಲಿಯಾದಾಗ ಸಹ ಅದೇ ಪರಿಸ್ಥಿತಿ ಹೊರತು ಹೊಸದೇನೂ ಇರುವುದಿಲ್ಲ. ಅಲ್ಲವೇ?
ಅನಿವಾಸಿ ಭಾರತೀಯರು ಸಂಖ್ಯೆಯಲ್ಲಿ 1.3 ಬಿಲಿಯನ್ ನ ಬರೀ 1% ಇದ್ದರೂ , ಅವರು ಮಾಡುವ ರೆಮಿಟೆನ್ಸ್ ಭಾರತದ ಜಿಡಿಪಿ ಯನ್ನು 2.9 ರಿಂದ 3.4 %(2018) . ಅಷ್ಟೇ ಅಲ್ಲದೆ ಎನ್‌ಆರ್‌ಐಗಳು ಭಾರತದಲ್ಲಿ ಮಾರುಕಟ್ಟೆ ಅಭಿವೃದ್ಧಿ, ಹೊರಗುತ್ತಿಗೆ, ತಂತ್ರಜ್ಞಾನ ವರ್ಗಾವಣೆ, ಪ್ರವಾಸೋದ್ಯಮ, ಮತ್ತು ರಾಜಕೀಯ ಮುಂತಾದ ವೈವಿಧ್ಯಮಯ ಚಟುವಟಿಕೆಗಳಲ್ಲಿ ವಿಲೀನಗೊಂಡಿದ್ದಾರೆ. RBI ಪ್ರಕಾರ ಅವರು ಕಳಿಸುವ ಹಣದಲ್ಲಿ 59.8 % ಸಂಸಾರ ನಿರ್ವಹಣೆಗಾಗಿಯಂತೆ. ಉಳಿದದ್ದು ಮಾತ್ರ ಬ್ಯಾಂಕ್ ಡೆಪಾಸಿಟ್ ಆಗಿಯೋ, ಬೇರೆ ಇನ್ವೆಸ್ಟ್ಮೆಂಟ್ ಗಾಗಿಯೋ ಕಳಿಸಿರುತ್ತಾರಂತೆ. ಅವರೂ ನಮ್ಮಂತೆಯೇ ತಮ್ಮ ಜೀವನಕ್ಕಾಗಿ, ತಮ್ಮ ಪ್ರೀತಿ ಪಾತ್ರರಿಗಾಗಿ ದುಡಿಯುವ ಪ್ರಯತ್ನ ಮಾಡುತ್ತಾರಲ್ಲವೇ? ದುಡಿದದ್ದನ್ನು ಊರಿಗೆ ಕಳಿಸುವ ಪ್ರಯತ್ನ ಮಾಡುತ್ತಾರಲ್ಲವೇ? ಬ್ಯಾಂಕಿನಲ್ಲೇ ಇಟ್ಟರೂ ಸಾಲಗಳ ಮೂಲಕ ಅವು ಸಿಗುವುದು ನಮ್ಮ ಉಪಯೋಗಕ್ಕೇ ಅಲ್ಲವೇ? ಬಡ್ಡಿಯ ಮಾತೇಕೆ? ನಾವೂ ಬಡ್ಡಿ ಇಲ್ಲದೇ ನಮ್ಮ ಹಣವನ್ನು ಎಲ್ಲಾದರೂ ಇಡುತ್ತೆವೆಯೇ?
ಇನ್ನು ವಿದ್ಯಾರ್ಥಿಗಳು, ನಮ್ಮಲ್ಲಿರುವ ಮೀಸಲಾತಿ ಪದ್ದತಿಗಳನ್ನು ದಾಟಿಕೊಂಡು, ಶಿಫಾರಸುಗಳನ್ನು ಮೀರಿ ಅದೆಷ್ಟು ಜನರಿಗೆ ತಮಗೆ ಬೇಕಾಗಿದ್ದು ಓದುವ ಅವಕಾಶ ದೊರೆಯಬಹುದು? ಅಂತಹಾ ಬುದ್ದಿವಂತರಾಗಿ ಎಲ್ಲರಿಗೂ ಹುಟ್ಟಲು ಸಾಧ್ಯವೇ? ಸಾಮಾನ್ಯದವರು ಏನು ಮಾಡಬೇಕು? ಈ ಶಿಫಾರಸುಗಳ ಹಿಂದಿರುವುದೂ ನನ್ನ ಎಂಬ ಸ್ವಾರ್ಥವಲ್ಲವೇ? ಆ ವಿದ್ಯಾರ್ಥಿಗಳು ಕಷ್ಟ ಪಟ್ಟು ಪರೀಕ್ಷೆಗಳನ್ನು ಎದುರಿಸಿ ಬರೀ ಬುದ್ಧಿಗೆ ಬೆಲೆಯಿರುವ ಜಾಗಕ್ಕೆ, ಜಾತಿ ಕೇಳದ, ಶಿಫಾರಸು ಕೇಳದ ಜಾಗಕ್ಕೆ ಹೋದರೆ ಅದು ತಪ್ಪೇ? ಹೀಗೆ ಹೊರ ಹೋದವರಿಗೆ ವಿದೇಶಗಳಲ್ಲಿ ಸಿಗುವುದು ಸೀಮಿತ ವೀಸಾ. ಅಂತಹವರು ವೀಸಾ ಮುಗಿದಾಗ, ನಮ್ಮಲ್ಲಿಗೆ ಅಲ್ಲದೆ ಇನ್ನೆಲಿಗೆ ಹೋಗಬೇಕು? ಹಾಗಿದ್ದೂ ಹೋದವರಲ್ಲಿ ಅನ್ನ, ಔಷಧಿಗಳ ಕೊರತೆಯಿಂದ ಕೈ ಚಾಚಿ ಊರಿಗೆ ಬರುವವರು ಕಡಿಮೆಯೇ. ನಮ್ಮ ಟಿವಿ ಚಾನಲ್ ಗಳು ಅದೆಷ್ಟು ಸುಳ್ಳು ತೋರಿಸುತ್ತವೆ ನಮಗೆ ಗೊತ್ತು. ಅವರ ಮಾತು ಕೇಳಿ, ನಮ್ಮ ಮನಸ್ಸಿನ ಹುಳಿ-ಮಸಾಲೆಗಳನ್ನು ಸೇರಿಸಿ, ನಾವೂ ಬರೆದದ್ದೇ ಬರೆದದ್ದು. ಅದೂ ನಮ್ಮದಲ್ಲದ ಫೇಸ್ಬುಕ್ ವಾಟ್ಸಪ್ಪ್ ಉಪಯೋಗಿಸಿ. ಇದು ಸರಿಯೇ?
ಅನಿವಾಸಿಗಳ ವಿಷಯ ಹೋಗಲಿ, ನಮಗೆ ನಮ್ಮ ದೇಶದಲ್ಲೇ ಉಳಿದ, ಅಣ್ಣ ತಮ್ಮಂದಿರನ್ನೂ ನಮ್ಮವರೆಂದು ಕಾಣುವ ಗುಣವಿಲ್ಲ. ಅವರನ್ನು “ಮೈಗ್ರಂಟ್ ವರ್ಕರ್ ” “ವಲಸೆ ಕಾರ್ಮಿಕರು ” ಎನ್ನುತ್ತೇವೆ. ಅವರೂ ನಮ್ಮಂತೆಯೇ ಭಾರತೀಯರಲ್ಲವೇ? ಅವರಿಗೂ ನಮ್ಮಷ್ಟೇ ಮಣ್ಣಿನ ಮೇಲೆ ಹಕ್ಕಿಲ್ಲವೇ? ಅದನ್ನು ಯೋಚಿಸುವುದಿಲ್ಲ. ಯಾಕೆಂದರೆ ನಮಗೆ ಗೊತ್ತಿರುವುದು “ನಾನು” ಎನ್ನುವುದು ಮಾತ್ರ. ಅಂತಹದರಲ್ಲಿ ಅಜ್ಜ ಅಪ್ಪ ಮಾಡಿದ ಆಸ್ತಿಗಾಗಿ ಜಗಳವಾಡದೆ, ಎಲ್ಲೋ ಹೋಗಿ, ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಕಷ್ಟ ಪಟ್ಟು ಕೆಲಸ ಮಾಡಿ ಬದುಕುವ ಅನಿವಾಸಿಗಳಿಗೆ, ವಲಸೆಗಾರರಿಗೆ ಲೆಕ್ಚರ್ ನೀಡುತ್ತೇವೆ. ಇಲ್ಲೇ ಇದ್ದು ಸಾಧಿಸಬೇಕಿತ್ತು ಎಂದು. ಹೌದು ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಹೋದಲ್ಲಿ ಉಗಿಯುವ, ಎಸೆಯುವ ಅಭ್ಯಾಸ ಸಂಪೂರ್ಣವಾಗಿ ಬಿಟ್ಟಿದೇವೆಯೇ? ಏನೂ ಗೊತ್ತಿಲ್ಲದೇ ಎಲ್ಲವನ್ನೂ ಪಾಶ್ಚಿಮಾತ್ಯ ಎಂದು ಬೈಯುವುದರ ಹೊರತಾಗಿ ಅಲ್ಲಿಯೂ ನಮ್ಮಂತೆಯೇ ಜನರಿದ್ದಾರೆ. ಸಂಸಾರಗಳಿವೆ, ವರ್ಷಾಂತರಗಳಿಂದ ಉಳಿದುಬಂದ ಸಂಸ್ಕೃತಿಗಳಿವೆ ಎಂದು ತಿಳಿಯುವ ಪ್ರಯತ್ನ ಮಾಡಿದ್ದೇವೆಯೇ? ಇಲ್ಲ, ಬಾವಿಯ ಕಪ್ಪೆಗಳಂತೆ ನಮ್ಮ ಕಣ್ಣಿಗೆ ಕಾಣುವುದಷ್ಟೇ ಸತ್ಯ. ಉಳಿದದ್ದೆಲ್ಲಾ ಮಿಥ್ಯ ಎಂದು ಭಾವಿಸುತ್ತೇವೆ.
ಸುಮ್ಮನೆ ಕೆಟ್ಟ ಭಾವನೆಗಳನ್ನು ಹರಡದೆ, ಫೇಸ್ಬುಕ್ ನಲ್ಲಿ ಟೈಮ್ ಪಾಸ್ ಮಾಡದೆ ನಮಗಾದ ಮಟ್ಟಿಗೆ ನಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡುತ್ತಾ, ಉಳಿದವರ ತಪ್ಪು ಅಳೆಯುವ, ಕೆದಕುವ ಬದಲು, ಒಳ್ಳೆಯ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಭಾರತಾಂಬೆಗೆ ಸಂತೋಷವಾಗುವುದಿಲ್ಲವೇ? ಎಲ್ಲರನ್ನೂ ಸಂಶಯದಿಂದ ನೋಡುವ ಭಾವನೆಗಳನ್ನು ಬೆಳೆಸುವ ಪ್ರಯತ್ನ ಮಾಡುವುದಕ್ಕಿಂತ, ಕೋರೋನ ಬಂದವರನ್ನು ಅಸ್ಪೃಶ್ಯರಂತೆ ನೋಡುವುದಕ್ಕಿಂತ, ಕೊರೋನಾ ಬಂದವರು ಹೆದರಿ ಅಡಗಿ ಕುಳಿತುಕೊಳ್ಳುವ ಪರಿಸರ ಬೆಳೆಸುವುದಕ್ಕಿಂತ, ಇಡೀ ವಿಶ್ವ ತೊಂದರೆಯಲ್ಲಿದೆ. ಅದನ್ನು ನಿವಾರಿಸಿಕೊಳ್ಳೋಣ ಎಂದು ವಿಶ್ವಾಸದಿಂದ ಒಬ್ಬರನ್ನೊಬ್ಬರು ನೋಡುವ, ಸಹಾಯಕ್ಕೆ ನಿಲ್ಲುವ ಭಾವನೆಗಳನ್ನು ಬೆಳೆಸುವುದು ಒಳ್ಳೆಯದಲ್ಲವೇ? ಸರ್ಕಾರ ನಿಯಮಿಸಿದ ಕಾನೂನುಗಳನ್ನು ಪರಿಪಾಲಿಸುವುದು ಒಳ್ಳೆಯದಲ್ಲವೇ? ಸ್ವಯಂ ನಿಯಂತ್ರಣವನ್ನು ಮೈಗೂಡಿಸಿಕೊಳ್ಳುವುದು ಈ ಸಂದರ್ಭಕ್ಕೆ ಉಚಿತವಾದುದಲ್ಲವೇ?
ಇನ್ನೂ ಪರಕೀಯವಾಗಿದ್ದು ಬೇಡ, ನಮ್ಮದು ಮಾತ್ರ ಸಾಕು ಎನಿಸಿದರೆ, ಫೇಸ್ ಬುಕ್, ವಾಟ್ಸಪ್ಪ್ ಆದಿಯಾಗಿ ಭಾರತೀಯವಲ್ಲದ ಯಾವುದೇ ವಸ್ತುಗಳನ್ನೂ ಉಪಯೋಗಿಸದೆ , ಭಾರತೀಯ ಪದ್ದತಿಯಂತೆ, ತನ್ನಾತ್ಮ ಸಂಶೋಧನೆ ಮಾಡಿ, ಸ್ವಾನ್ನತಿ ಮಾಡಿಕೊಂಡು ಬದುಕಿ ತೋರಿಸಿದರೆ, ಸುತ್ತಲಿನವರಿಗೂ ಮಾದರಿಯಾಗುತ್ತೇವೆ. ಮಾತಿಗಿಂತ ಕಾರ್ಯ ಒಳ್ಳೆಯದಲ್ಲವೇ ?
ಅಥವಾ ಕುವೆಂಪುರವರ ವಿಶ್ವಮಾನವ ಸಂದೇಶವನ್ನರಿತು ಅದರಂತೆ ಬಾಳಲು ಪ್ರಯತ್ನಿಸುವುದು ಉತ್ತಮವಲ್ಲವೇ?
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020